ಹಾಸನ: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ

ಜೈನರ ಪವಿತ್ರ ಕ್ಷೇತ್ರಗಳಲ್ಲೊಂದಾದ ಶ್ರವಣಬೆಳಗೊಳದ ದಿಗಂಬರ ಜೈನಮಠದ ಮುಖ್ಯಸ್ಥ ಹಾಗೂ ಧರ್ಮಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹಾಸನ: ಜೈನರ ಪವಿತ್ರ ಕ್ಷೇತ್ರಗಳಲ್ಲೊಂದಾದ ಶ್ರವಣಬೆಳಗೊಳದ ದಿಗಂಬರ ಜೈನಮಠದ ಮುಖ್ಯಸ್ಥ ಹಾಗೂ ಧರ್ಮಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದರು. 

74 ವರ್ಷದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಬೆಳಗ್ಗೆ 6.30ರ ಸುಮಾರಿಗೆ ಬೆಳಗಿನ ವಾಕಿಂಗ್ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಸ್ವಾಮೀಜಿಯವರನ್ನು ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ದರೂ ಆದರೆ ಬದುಕುಳಿಯಲಿಲ್ಲ.

ಚಾರುಕೀರ್ತಿಗೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಇಲ್ಲಿಯವರೆಗೆ 12 ವರ್ಷಗಳಿಗೊಮ್ಮೆ ನಡೆಯುವ 4 ಮಹಾಮಸ್ತಕಾಭಿಷೇಕಗಳ ನೇತೃತ್ವ ವಹಿಸಿದ್ದಾರೆ. ಅವರು 1970ರಲ್ಲಿ ದಿಗಂಬರ್ ಜೈನ ಮಠದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸ್ವಾಮೀಜಿಯವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕ್ರಮವಾಗಿ ಇತಿಹಾಸ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಲು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಸ್ವಾಮೀಜಿ ಅವರಿಗೆ 'ಕರ್ಮಯೋಗಿ' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ಗುರುವಾರ ಸಂಜೆ ಜೈನ ಸಂಪ್ರದಾಯದಂತೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಮಠದ ಪ್ರಾಧಿಕಾರ ಮುಂದಾಗಿದೆ. ಶ್ರವಣಬೆಳಗೊಳ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸ್ವಾಮೀಜಿಯವರ ನಿಧನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com