ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆ

ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ.
ಗಿಟಾರ್ ಫಿಶ್
ಗಿಟಾರ್ ಫಿಶ್
Updated on

ಕಾಸರಕೋಡು (ಉತ್ತರ ಕನ್ನಡ): ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ.

ಇದು ಚಿಕ್ಕ ಶಾರ್ಕ್ ಗಳಲ್ಲಿ ಒಂದಾಗಿದ್ದು, ಸುಮಾರು 1 ಅಡಿ ಉದ್ದವನ್ನು ಹೊಂದಿದೆ. ಕಡಲತೀರಗಳಲ್ಲಿ ಅಪರೂಪವಾಗಿ ಈ ಮೀನುಗಳು ಕಂಡು ಬರುತ್ತವೆ.

ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್ ಸಿದ್ಲಾನಿ ಹೇಳಿದ್ದಾರೆ.

ಇದು ಚಿಕ್ಕ ಶಾರ್ಕ್‌ಗಳಲ್ಲಿ ಒಂದಾಗಿದೆ ಮತ್ತು ಅಪರೂಪವಾಗಿ ಕಂಡುಬರುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಹೇಳಿದ್ದಾರೆ.

ನೀರಿನ ಆಳದಲ್ಲಿ ವಾಸಿಸುವ ಮೀನು ಇದಾಗಿದೆ ಎಂದು ಸಮುದ್ರ ಜೀವಶಾಸ್ತ್ರ ವಿಭಾಗದ ಸಂಶೋಧಕ ಸೂರಜ್ ಪೂಜಾರ್ ಹೇಳಿದ್ದಾರೆ.

ನಾಚಿಕೆ ಸ್ವಭಾವವುಳ್ಳ ಮೀನು ಇದಾಗಿದ್ದು, ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮೀನು ಫೈಟೊಪ್ಲಾಂಕ್ಟನ್ ಮತ್ತು ಝೂಪ್ಲ್ಯಾಂಕ್ಟನ್ಗಳನ್ನು ತಿನ್ನುತ್ತದೆ. ಈ ಮೀನುಗಳು ಬೇಟೆಯಾಡಲು ದೇಹದಿಂದಲೇ ವಿದ್ಯುತ್ ರೀತಿಯ ತರಂಗಗಳನ್ನು ಉತ್ಪಾದಿಸಿ ಹೊರಬಿಡುತ್ತವೆ. ಸಮುದ್ರದ ಆಳದಲ್ಲಿ ವಾಸಿಸುವ ಮೀನುಗಳು, ಮೇಲೆ ಬರುವುದು ಅತ್ಯಂತ ವಿರಳ ಎಂದು ಮತ್ತೊಬ್ಬ ಸಂಶೋಧಕ ಕಿರಣ್ ವಾಸುದೇವಮೂರ್ತಿ ಹೇಳಿದ್ದಾರೆ.

ಈ ಮೀನು ತಲೆಯ ಎರಡೂ ಬದಿಯಲ್ಲಿ ಪೆಕ್ಟೋರಲ್ ರೆಕ್ಕೆಗಳನ್ನು ಹೊಂದಿರುವ ಚಪ್ಪಟೆಯಾದ ಮುಂಭಾಗವನ್ನು ಹೊಂದಿರುತ್ತದೆ. ದೊಡ್ಡ ಶಾರ್ಕ್ಗಳಂತೆ ಇವೂ ಕೂಡ ಮರಿಗಳಿಗೆ ಜನ್ಮ ನೀಡುತ್ತದೆ ಎಂದು ತಿಳಿದುಬಂದಿದೆ.

ನೀರಿನ ಅಲೆ ಜೋರಾಗಿದ್ದಾಗ ಹಲವಾರು ಜಾತಿಯ ಮೀನುಗಳು ಮತ್ತು ಜೆಲ್ಲಿ ಮೀನುಗಳು ಕಡಲತೀರದಲ್ಲಿ ದಡಕ್ಕೆ ಕೊಚ್ಚಿಹೋಗುತ್ತವೆ. ಇದರಲ್ಲಿ ಅಪರೂಪದ ನೀಲಿ ಜೆಲ್ಲಿ ಮೀನುಗಳೂ ಕೂಡ ಇರುತ್ತವೆ. ಈ ವರ್ಷ ಎರಡು ಆಲಿವ್ ರಿಡ್ಲಿ ಆಮೆಗಳು ಕಡಲತೀರದಲ್ಲಿ ಗೂಡುಕಟ್ಟಿರುವುದು ಕಂಡು ಬಂದಿತ್ತು. ಇವುಗಳ ಮೊಟ್ಟೆಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಕಾಸರಕೋಡ್ ಬೀಚ್ ಅಂತರರಾಷ್ಟ್ರೀಯ ಮಾನ್ಯತೆಯ ಬ್ಲ್ಯೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿದೆ. ಡೆನ್ಮಾರ್ಕಿನ ಕೋಪನ್ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ. ಈ ಹೆಗ್ಗಳಿಕೆಯನ್ನು ಪಡೆದುಕೊಳ್ಳಲು ಸ್ಥಳೀಯ ಆಡಳಿತವು ಕಡಲತೀರದ ಸ್ವಚ್ಛತೆ, ಅಲ್ಲಿನ ನೀರಿನ ಗುಣಮಟ್ಟ, ಪರಿಸರ ಸ್ನೇಹಿ ನಿರ್ಮಾಣಗಳು ಸೇರಿದಂತೆ 33 ವಿಭಾಗಗಳಲ್ಲಿ ನಿಗದಿ ಮಾಡಲಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಮಾನದಂಡಗಳನ್ನು ಪಾಲಿಸಿದ ಬೀಚ್ ಗಳನ್ನು ವಿಶ್ವದ ಅತ್ಯಂತ ಸ್ವಚ್ಛ ಬೀಚ್ ಎಂದು ಪರಿಗಣಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com