
ಕೊಡವ ಸಮುದಾಯ (ಸಂಗ್ರಹ ಚಿತ್ರ)
ನವದೆಹಲಿ: ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಮಂಡ್ಯ ಪ್ರಾಧ್ಯಾಪಕ ಜಯಪ್ರಕಾಶ್ ಗೌಡ ಅವರ ಕ್ಷಮೆಯಾಚನೆಗೆ ಕೊಡವ ಸಮಾಜ ಪಟ್ಟು ಹಿಡಿದಿದೆ.
ಜಯಪ್ರಕಾಶ್ ಗೌಡ ಕ್ಷಮೆ ಕೋರದೇ ಇದ್ದಲ್ಲಿ ವಿಷಯದ ಬಗ್ಗೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ.
ಮೈಸೂರು ರಂಗಾಯಣ ಅಧ್ಯಕ್ಷ ಅದ್ದಂಡ ಕಾರ್ಯಪ್ಪ, ಇತ್ತೀಚೆಗೆ ಉರಿ ಗೌಡ ನಂಜೇಗೌಡ ಎಂಬ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಆದಿಚುಂಚನಗಿರಿ ಸ್ವಾಮೀಜಿ ಅವರ ಅಭಿಪ್ರಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯ ನಂತರ, ಕಾರ್ಯಪ್ಪ ಅವರ ಆಕ್ಷೇಪವನ್ನು ವಿರೋಧಿಸಿ, ಮಂಡ್ಯ ಜಿಲ್ಲಾ ಕರ್ನಾಟಕ ಸಂಘದ ಪ್ರೊಫೆಸರ್ ಜಯಪ್ರಕಾಶ್, ಕೊಡವ ರಕ್ತ, ಹೈಬ್ರೀಡ್ ರಕ್ತ ಎಂಬ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ವಿವಾದಕ್ಕೆ 'ಮದ್ದು' ಅರೆದ ನಿರ್ಮಲಾನಂದ ಸ್ವಾಮೀಜಿ: ಗೊಂದಲ ಸೃಷ್ಟಿಸದಂತೆ ಬಿಜೆಪಿ ನಾಯಕರಿಗೆ ಕಿವಿಮಾತು!
ಈ ಹೇಳಿಕೆಯ ವಿರುದ್ಧ ಕೊಡವ ಸಮಾಜ, ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕ್ಷಮೆಗೆ ಆಗ್ರಹಿಸಿದೆ. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪಿ ಸುಬ್ರಹ್ಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜದ ಯುವ ಘಟಕದ ಅಧ್ಯಕ್ಷ ಪಿ ಪ್ರವೀಣ್ ಉತ್ತಪ್ಪ ಜಯಪ್ರಕಾಶ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.