ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಶುಲ್ಕದಲ್ಲಿ ಮತ್ತೆ ಹೆಚ್ಚಳ: ಏಪ್ರಿಲ್ 1 ರಿಂದ ಹೊಸ ದರ ಜಾರಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಕ್ಸಮರಗಳು ನಡೆಯುತ್ತಲೇ ಇವೆ. ಇದರ ನಡುವಲ್ಲೇ ಟೋಲ್ ಸಂಗ್ರಹ ಆರಂಭವಾಗಿ ಕೇವಲ 15 ದಿನಗಳಲ್ಲೇ ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ.
Published: 31st March 2023 02:29 PM | Last Updated: 31st March 2023 03:00 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಕ್ಸಮರಗಳು ನಡೆಯುತ್ತಲೇ ಇವೆ. ಇದರ ನಡುವಲ್ಲೇ ಟೋಲ್ ಸಂಗ್ರಹ ಆರಂಭವಾಗಿ ಕೇವಲ 15 ದಿನಗಳಲ್ಲೇ ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ.
ಟೋಲ್ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡಲಾಗಿದ್ದು, ಈ ಪರಿಷ್ಕೃತ ದರ ನಾಳೆಯಿಂದಲೇ (ಏಪ್ರಿಲ್ 1) ಜಾರಿಗೆ ಬರಲಿದೆ.
ಹೊಸ ಟೋಲ್ ದರದ ಮಾಹಿತಿ ಇಲ್ಲಿದೆ...
- ಕಾರ್, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು ರೂ.135ರಿಂದ ರೂ.165ಕ್ಕೆ ಏರಿಸಲಾಗಿದೆ. ದ್ವಿಮುಖ ಸಂಚಾರ ದರವು ರೂ.205 ರಿಂದ ರೂ.250ಕ್ಕೆ ಏರಿಕೆಗೊಂಡಿದೆ.
- ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ರೂ.220ರಿಂದ ರೂ.270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆರೂ.405 (ರೂ.75 ಹೆಚ್ಚಳ) ನಿಗದಿ ಆಗಿದೆ.
- ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ರೂ.565ಕ್ಕೆ ಏರಿಕೆ ಆಗಿದೆ (ರೂ.105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ರೂ.850 ನಿಗದಿಪಡಿಸಲಾಗಿದೆ (ರೂ.160 ಹೆಚ್ಚಳ).
- 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ರೂ.615 (ರೂ.115 ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ ರೂ.925 (ರೂ.225 ಹೆಚ್ಚಳ) ಏರಿಕೆಯಾಗಿದೆ.
- ಭಾರಿ ವಾಹನಗಳ ಏಕಮುಖ ಟೋಲ್ ರೂ.885 (ರೂ.165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ ರೂ.1,330 (ರೂ.250 ಹೆಚ್ಚಳ) ನಿಗದಿ ಆಗಿದೆ.
- 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ರೂ.1,080 (ರೂ.200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ರೂ.1,620 (ರೂ.305 ಏರಿಕೆ) ನಿಗದಿ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ 12ರಂದು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಮಾರ್ಚ್ 14ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹ ಆರಂಭವಾದ 15 ದಿನದಲ್ಲೇ ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿದ್ದು, ಈ ನಿರ್ಧಾರವು ವಾಹನ ಸವಾರರ ಕೆಣ್ಣು ಕೆಂಪಗಾಗುವಂತೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇ-ವೇ ಟೋಲ್ ಸಂಗ್ರಹಕ್ಕೆ ವಿರೋಧ: ಕಾಂಗ್ರೆಸ್ ನಿಂದ ಪ್ರತಿಭಟನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ಅವರು, ಹೈವೇ ಅಥಾರಿಟಿ ಪ್ರತಿ ವರ್ಷ ಟೋಲ್ ದರ ಹೆಚ್ಚಿಸುವುದು ಸಾಮಾನ್ಯ. ದೇಶದ ಎಲ್ಲಾ ಟೋಲ್ ದರಗಳಲ್ಲೂ ಹೆಚ್ಚಳ ಆಗಿದೆ. ಆದರೆ, ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಚ್ 14 ರಂದು ಪ್ರಾರಂಭ ಆಗಿದೆ. ನಾನು ಈಗಾಗಲೇ ಹೈವೇ ಅಥಾರಿಟಿಯ ಹಿರಿಯ ಅಧಿಕಾರಿಗಳ ಜತೆ ಮಾತಾಡಿದ್ದೇನೆ. ಟೋಲ್ ದರ ಹೆಚ್ಚಳ ನಿರ್ಧಾರ ಪರಾಮರ್ಶೆ ಮಾಡಬೇಕೆಂದು ಮನವಿ ಮಾಡಿದ್ದೇನೆಂದು ಹೇಳಿದರು.
ಟೋಲ್ ದರ ಯಥಾಸ್ಥಿತಿ ಮುಂದುವರೆಸುವಂತೆ ಮನವಿ ಮಾಡಿದ್ದೇನೆ. ಇಂದು ಸಂಜೆ ಒಳಗೆ ಹೈವೇ ಅಥಾರಿಟಿಯವರು ತಮ್ಮ ನಿರ್ಣಯವನ್ನು ತಿಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.