ನನ್ನನ್ನೂ ನಿಂದಿಸಿದ್ದಾರೆ, ಆದರೆ ನಾನು ಎಂದಿಗೂ ಗೋಳಾಡಿಲ್ಲ, ಮೋದಿ ಕ್ರೈಯಿಂಗ್ ಬೇಬಿ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಬೆಳಗ್ಗೆಯಿಂದ ಸಂಜೆವರೆಗೆ ಅಳುತ್ತಲೇ ಇರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರೂಢಿಯಾಗಿ ಬಿಟ್ಟಿದೆ. ಅವರೊಬ್ಬ ಅಳುವ ಕೂಸು (ಕ್ರೈಯಿಂಗ್ ಬೇಬಿ) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು 91 ಬಾರಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ ಎನ್ನುವ ಮೋದಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಡಿರುವ ಹಗುರ ಮಾತುಗಳನ್ನು ಮರೆತಿದ್ದಾರೆ. ಸೋನಿಯಾ ಗಾಂಧಿಗೆ ವಿಡೋ (ವಿಧವೆ), ಇಟಲಿ ಗರ್ಲ್ ಎನ್ನುವ ಪದ ಬಳಸಿದ್ದರು. ರಾಹುಲ್ ಗಾಂಧಿ ಒಬ್ಬ ಹೈಬ್ರಿಡ್ ಎಂದಿದ್ದರು. ಇಷ್ಟೆಲ್ಲಾ ಹಗುರವಾದ ಮಾತುಗಳನ್ನು ನಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಆಡಿದ್ದರೂ ನಾವ್ಯಾರೂ ಮೋದಿ ಅವರಂತೆ ಅಳುತ್ತಾ ಕುಳಿತಿಲ್ಲ. ಇದೊಂದು ಯುದ್ಧವೆನ್ನುವುದು ನಮಗೆ ಗೊತ್ತು. ಬರೀ ಅಳುತ್ತಾ ಕುಳಿತುಕೊಂಡರೆ ಆಗಲ್ಲ ಎಂದು ಹೇಳಿದರು.
ತಾವೊಬ್ಬ ಹಿಂದುಳಿದ ವರ್ಗದ ವ್ಯಕ್ತಿ ಆಗಿರುವುದರಿಂದ ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆಂದು ಹೇಳಿ ಜನರ ಸಹಾನುಭೂತಿ ಗಳಿಸಲು ಮೋದಿಯವರು ಹೇಳುತ್ತಿದ್ದಾರೆ. ಆದರೆ, ಮೋದಿಯವರು ಒಂದು ಅಂಶವನ್ನು ನೆನಪಿಡಬೇಕು. ನಾನು ದಲಿತ. ಮೋದಿಗಿಂತಲೂ ಕೆಳಗೆ ಇದ್ದೇನೆ. ಮೊದಲು ನನ್ನ ತಲೆಯ ಮೇಲೆ ಕಾಲಿಟ್ಟ ಮೇಲೆಯೇ ನಿಮ್ಮ ಕಡೆಗೆ ಬರುತ್ತಾರೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಪಕ್ಷದ ಭರವಸೆ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಹಿರಿಯ ನಾಯಕರು ಪ್ರಾಣಾಳಿಕೆಯನ್ನು ಸಿದ್ಧಪಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಇದನ್ನು ದೊಡ್ಡ ವಿಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಭರವಸೆಗಳನ್ನು ಕಾರ್ಯಗತಗೊಳಿಸಲು ಅಸಾಧ್ಯ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಪಕ್ಷ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಅವುಗಳನ್ನು ಜಾರಿಗೆ ತರಲಾಗುತ್ತದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು 165 ಭರವಸೆಗಳನ್ನು ನೀಡಿದ್ದೆವು. ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಭರವಸೆಗಳ ಕುರಿತು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ