ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರಿ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ; ನಾಳೆ ವೇದಿಕೆ ಸಜ್ಜು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಹೈವೋಲ್ಟೇಜ್ ಪ್ರಚಾರದ ನಂತರ ಇದೀಗ ಕರ್ನಾಟಕದಲ್ಲಿ ಮತದಾನಕ್ಕೆ ಕಾಲ ಕೂಡಿಬಂದಿದ್ದು, 224 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯಲಿದೆ. ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡುತ್ತಿದೆ. 
Published on

ಬೆಂಗಳೂರು: ಹೈವೋಲ್ಟೇಜ್ ಪ್ರಚಾರದ ನಂತರ ಇದೀಗ ಕರ್ನಾಟಕದಲ್ಲಿ ಮತದಾನಕ್ಕೆ ಕಾಲ ಕೂಡಿಬಂದಿದ್ದು, 224 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯಲಿದೆ. ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡುತ್ತಿದೆ. 

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಈ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ರಾಜ್ಯದಾದ್ಯಂತ 58,545 ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆಯಲಿದ್ದು, ಒಟ್ಟು 5,31,33,054 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸದ್ಯ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ, 2,430 ಪುರುಷರು, 184 ಮಹಿಳೆಯರು ಮತ್ತು ಒಬ್ಬರು ತೃತೀಯಲಿಂಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಮತದಾರರಲ್ಲಿ, 2,67,28,053 ಪುರುಷರು, 2,64,00,074 ಮಹಿಳೆಯರು ಮತ್ತು 4,927 ಇತರರು ಇದ್ದಾರೆ. ರಾಜ್ಯದಲ್ಲಿ 11,71,558 ಯುವ ಮತದಾರರಿದ್ದರೆ, 5,71,281 ವಿಕಲಚೇತನರು (ಪಿಡಬ್ಲ್ಯೂಡಿ) ಮತ್ತು 12,15,920 80 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. 

ಆಡಳಿತಾರೂಢ ಬಿಜೆಪಿಯು ಮತ್ತೆ ಅಧಿಕಾರಕ್ಕೇರುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದು, ಕಾಂಗ್ರೆಸ್ ಕೂಡ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಯತ್ನಿಸುತ್ತಿದೆ. 2024ರ ಲೋಕಸಭಾ ಚುನಾವಣೆಗೆ ರಾಜ್ಯದ ಚುನಾವಣೆ ದಿಕ್ಸೂಚಿಯಾಗಲಿದೆ ಎಂದೇ ಹೇಳಲಾಗುತ್ತಿದೆ. 

ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜನತಾ ದಳ (ಜಾತ್ಯತೀತ) (ಜೆಡಿಎಸ್) ಸರ್ಕಾರ ರಚನೆಯಲ್ಲಿ 'ಕಿಂಗ್ ಮೇಕರ್' ಆಗಿ ಹೊರಹೊಮ್ಮುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಈ ಹಿಂದೆಯೂ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳಿಗೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿತ್ತು.

ಒಟ್ಟು 75,603 ಬ್ಯಾಲೆಟ್ ಯೂನಿಟ್‌ಗಳು (ಬಿಯು), 70,300 ಕಂಟ್ರೋಲ್ ಯೂನಿಟ್‌ಗಳು (ಸಿಯು) ಮತ್ತು 76,202 ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಗಳನ್ನು ಮತದಾನದ ಸಮಯದಲ್ಲಿ ಬಳಸಲು ನಿರ್ಧರಿಸಲಾಗಿದೆ.

ಚುನಾವಣಾಧಿಕಾರಿಗಳ ಪ್ರಕಾರ, ಸುಗಮ ಚುನಾವಣೆ ನಡೆಸಲು ರಾಜ್ಯದಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ನೆರೆಯ ರಾಜ್ಯಗಳಿಂದ ಪಡೆಗಳನ್ನು ನಿಯೋಜಿಸಲಾಗಿದೆ.

ಮತದಾನ ಪ್ರಕ್ರಿಯೆಯ ಮೇಲೆ ನಿಗಾ ಇಡಲು ಮೈಕ್ರೋ ಅಬ್ಸರ್ವರ್‌ಗಳು, ವೆಬ್‌ಕಾಸ್ಟಿಂಗ್ ಮತ್ತು ಸಿಸಿಟಿವಿಗಳಂತಹ ಒಂದು ಅಥವಾ ಹೆಚ್ಚಿನ ಕ್ರಮಗಳನ್ನು ಆಯೋಗ ಕೈಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com