ಕರ್ನಾಟಕ ಚುನಾವಣೆ 2023: ಬಿಜೆಪಿ ಪರ ಅಧಿಕಾರಿ ಮತ ಚಲಾವಣೆ; ಅಧಿಕಾರಿ ಬದಲಾಯಿಸಿದ ಆಯೋಗ

ಕರ್ನಾಟಕ ಚುನಾವಣೆ 2023ಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿರುವಂತೆಯೇ ಇತ್ತ ಕಲಬುರಗಿಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇರೆಗೆ ಅಧಿಕಾರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕರ್ನಾಟಕ ಚುನಾವಣೆ 2023ಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿರುವಂತೆಯೇ ಇತ್ತ ಕಲಬುರಗಿಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇರೆಗೆ ಅಧಿಕಾರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಚಾಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಅಧಿಕಾರಿಯೊಬ್ಬರು ಮತದಾರರ ಪರವಾಗಿ ಬಿಜೆಪಿ ಪರ ಬಟನ್ ಒತ್ತಿದ ಆರೋಪದ ಮೇರೆಗೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೂಲಗಳ ಪ್ರಕಾರ ಬಿ.ಸಿ. ಚವ್ಹಾಣ ಎಂಬ ಚುನಾವಣಾ ಅಧಿಕಾರಿ ಮೇಲೆ ಈ ಆರೋಪ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನಂತರ ಚಿತ್ತಾಪುರ ಚುನಾವಣಾಧಿಕಾರಿ ನವೀನ್ ಕುಮಾರ್ ಯು. ಅಧಿಕಾರಿಯನ್ನು ಬದಲಾಯಿಸಿದ್ದಾರೆ.

ಬಸಮ್ಮ ಎಂಟುಮನ್ ಎಂಬ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಗೆ ಬಟನ್ ಒತ್ತಲು ತಿಳಿಸಿದ್ದಾಳೆ. ಆದರೆ ಚುನಾವಣಾಧಿಕಾರಿ ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದಾಗ ಘಟನೆ ಬಯಲಿಗೆ ಬಂದಿದೆ.

ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಯ ಸುಮಾರು ಐವತ್ತಕ್ಕೂ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಭಗವಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಬದಲಾಯಿಸುವಂತೆ ಚುನಾವಣಾ ಅಧಿಕಾರಿ ಮೇಲೆ ಒತ್ತಡ ಹೇರಿದ ಮೇಲೆ ಅವರನ್ನು ಬದಲಾಯಿಸಲಾಯಿತು. ಇದೇ ವಿಚಾರವಾಗಿ ಟ್ವೀಟ್ ಕೂಡ ಮಾಡಿರುವ ಪ್ರಿಯಾಂಕ್ ಖರ್ಗೆ, ಮತಗಟ್ಟೆ ಅಧಿಕಾರಿ ಬಿಜೆಪಿ ಪರ ಮತದಾರರನ್ನು ಸೆಳೆಯಲು ಯತ್ನಿಸಿದ ಪರಿಣಾಮ ಮತದಾನ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಆರೋಪಿ ಅಧಿಕಾರಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com