ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಚೇಸ್ ಮಾಡಿ ಹಿಡಿದ ಕಲಬುರಗಿ ಜಿಲ್ಲಾಧಿಕಾರಿ!
ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಆಮಿಷ ಒಡ್ಡಿ, ಹಣ ಹಂಚಿಕೆ ಮಾಡುತ್ತಿದ್ದ ಇಬ್ಬರನ್ನು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಬೆನ್ನಟ್ಟಿ ಹಿಡಿದ ಘಟನೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಕಳೆದ ರಾತ್ರಿ ನಡೆದಿದೆ.
Published: 10th May 2023 11:43 AM | Last Updated: 10th May 2023 03:56 PM | A+A A-

ಕಲಬುರಗಿ ಜಿಲ್ಲಾಧಿಕಾರಿ
ಕಲಬುರಗಿ: ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಆಮಿಷ ಒಡ್ಡಿ, ಹಣ ಹಂಚಿಕೆ ಮಾಡುತ್ತಿದ್ದ ಇಬ್ಬರನ್ನು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಬೆನ್ನಟ್ಟಿ ಹಿಡಿದ ಘಟನೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಇಲ್ಲಿನ ದಕ್ಷಿಣ ಮತಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬೆನ್ನಟ್ಟಿ ಹಿಡಿದಿದ್ದಾರೆ.
ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಡೆಯವರು ಎನ್ನಲಾದ ಇಬ್ಬರು ಕಳೆದ ರಾತ್ರಿ 1ಗಂಟೆಗೆ ಬೀದಿ ದೀಪ ಬಂದ್ ಮಾಡಿ ಹಣ ಹಂಚಲು ಮುಂದಾಗಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದರು. ಪೊಲೀಸರ ಗಮನಕ್ಕೂ ತರದೇ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದರು.
ಇದನ್ನ ಓದಿ: ಖರ್ಗೆ ತವರಲ್ಲಿ ಕೇಸರಿ ಕಲಿಗಳ ಬಲ ಪ್ರದರ್ಶನ: ಎಐಸಿಸಿ ಅಧ್ಯಕ್ಷರ ಶಕ್ತಿ ಕುಂದಿಸಲು ಘಟಾನುಘಟಿಗಳ ರಂಗ ಪ್ರವೇಶ!
ಇದರಿಂದ ಕಕ್ಕಾಬಿಕ್ಕಿಯಾದ ಇಬ್ಬರು ಕಾರನ್ನು ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗುತ್ತಿದ್ದರು. ಅವರ ಬೆನ್ನಟ್ಟಿದ ಜಿಲ್ಲಾಧಿಕಾರಿ ಕೇಂದ್ರ ಬಸ್ ನಿಲ್ದಾಣ ಸಮೀಪದ ವಿದ್ಯಾನಗರದ ಬಳಿ ಕಾರನ್ನು ತಡೆದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರ ಕೊರಳಪಟ್ಟಿ ಹಿಡಿದು ವಶಕ್ಕೆ ಪಡೆದರು.
ಜಿಲ್ಲಾಧಿಕಾರಿ ಬರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಣದ ಬ್ಯಾಗ್ ನೊಂದಿಗೆ ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರನ್ನು ನಿಲ್ಲಿಸು ಎಂದರೂ ಕೇಳದೇ ವೇಗವಾಗಿ ಚಲಾಯಿಸಿದ ಕಾರು ಚಾಲಕನನ್ನು ಜಿಲ್ಲಾಧಿಕಾರಿ ಗುರುಕರ್ ಅವರು ತರಾಟೆಗೆ ತೆಗೆದುಕೊಂಡ ದೃಶ್ಯ ವಿಡಿಯೊದಲ್ಲಿದೆ.