ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023: 36 ಕೇಂದ್ರಗಳಲ್ಲಿ ಮತ ಎಣಿಕೆ,  2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ  2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ  2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯ ವಿಧಾನಸಭೆಗೆ 224 ಸದಸ್ಯರನ್ನು ಆಯ್ಕೆ ಮಾಡಲು ನಡೆದಿದ್ದ ಮತದಾನ ಮುಗಿದ ಮೂರು ದಿನಗಳ ನಂತರ ಇಂದು ಮತಎಣಿಕೆ ಕಾರ್ಯ ನಡೆಯಲಿದ್ದು, ರಾಜ್ಯಾದ್ಯಂತ ಇರುವ 36 ಮತ ಎಣಿಕೆ ಕೇಂದ್ರಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ. ಸುಮಾರು 23 ರಿಂದ 24 ಸುತ್ತುಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಲಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ 306 ಎಣಿಕೆ ಕೇಂದ್ರಗಳಲ್ಲಿನ 4, 256 ಟೇಬಲ್ ಗಳಲ್ಲಿ 13, 796 ಮಂದಿ ಸಿಬ್ಬಂದಿಗಳು 23 ರಿಂದ 24 ಸುತ್ತುಗಳಲ್ಲಿ ಮತಎಣಿಕೆ ಕಾರ್ಯ ನಡೆಸಲಿದ್ದಾರೆ.

ಇದೇ ಮೇ 10ರಂದು ನಡೆದಿದ್ದ ಮತದಾನದ ವೇಳೆ ರಾಜ್ಯಾದ್ಯಂತ ಶೇ.73.19 ರಷ್ಟು ಮತದಾನವಾಗಿತ್ತು. 2018 ರಲ್ಲಿ ದಾಖಲಾದ 72.36 ಶೇಕಡಾ ದಾಖಲೆಯ ಮತದಾನವನ್ನು ಈ ಬಾರಿಯ ಮತದಾನ ಮೀರಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ.0.83ರಷ್ಟು ಹೆಚ್ಚು ಮತದಾನವಾಗಿದೆ. ಯುವ ಮತದಾರರು ಈ ಬಾರಿಯೂ ನಿರ್ಣಾಯಕವಾಗಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ 11.71 ಲಕ್ಷ ಮೊದಲ ಬಾರಿಯ ಮತದಾರರು ನೋಂದಣಿಯಾಗಿದ್ದರು. ಒಟ್ಟು 737 ಥೀಮ್ ಆಧಾರಿತ ಮತ್ತು ಜನಾಂಗೀಯ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾನ ನಡೆಸಲಾಗಿತ್ತು. 

ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಯುವ ಮತದಾರರನ್ನು ಪ್ರೇರೇಪಿಸಲು ಭಾರತೀಯ ಚುನಾವಣಾ ಆಯೋಗದ (ಇಸಿಐ) ಉಪಕ್ರಮದ ಭಾಗವಾಗಿ, 286 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಅಲ್ಲಿ ಯುವ ಸಿಬ್ಬಂದಿಯಿಂದ ಪ್ರಕ್ರಿಯೆ ನಿರ್ವಹಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com