ಕಾಂಗ್ರೆಸ್ ಗೆಲುವಿನಿಂದ ಉತ್ಸುಕರಾಗಿರುವ ಮಾಜಿ ಕಾರ್ಪೋರೇಟರ್ಸ್: ಪಾಲಿಕೆ ಚುನಾವಣೆ ನಡೆಸಲು ಹೊಸ ಸರ್ಕಾರಕ್ಕೆ ಒತ್ತಾಯ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವಿನಿಂದ ಉತ್ಸುಕರಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್‌ಗಳು ಶೀಘ್ರವೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವಿನಿಂದ ಉತ್ಸುಕರಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್‌ಗಳು ಶೀಘ್ರವೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

''ಹಿಂದಿನ ಸರಕಾರ ಬಿಬಿಎಂಪಿ ಚುನಾವಣೆಯನ್ನು ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ನಾವು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇವೆ. ಈಗ ಕಾಂಗ್ರೆಸ್‌ಗೆ ಪೂರ್ಣ ಬಹುಮತವಿದ್ದು, ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು,ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತೇವೆ’’ ಎಂದು ಮನೋರಾಯನ ಪಾಳ್ಯ ವಾರ್ಡ್‌ನ ಕಾರ್ಪೊರೇಟರ್ ಅಬ್ದುಲ್ ವಾಜಿದ್ ಹೇಳಿದ್ದಾರೆ. ವಾಜಿದ್ ಜೊತೆಗೆ ಶಿವರಾಜು, ಮಂಜುನಾಥ್ ರೆಡ್ಡಿ, ರಿಜ್ವಾನ್ ನವಾಬ್, ಜಿ ಪದ್ಮಾವತಿ ಮತ್ತು ಇತರರು ಕೂಡ ಬಿಬಿಎಂಪಿಯಲ್ಲಿಯೂ ಕಾಂಗ್ರೆಸ್‌  ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್‌ ಬಿಬಿಎಂಪಿ ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ನಾವು ಬಲಿಷ್ಠ ಸರ್ಕಾರವನ್ನು ಹೊಂದಿರುವುದರಿಂದ  ಮುಂದಿನ ಗೆಲುವು ಸಹ ನಮ್ಮದೆ ಆಗಿರುತ್ತದೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಲು ನಮ್ಮ ನಾಯಕರ ಜೊತೆ ಮಾತನಾಡಲು ಯೋಜಿಸಿದ್ದೇವೆ ಎಂದು ಶಿವನಗರ ವಾರ್ಡ್ ಪ್ರತಿನಿಧಿಸಿದ್ದ  ಶಿವರಾಜು ಹೇಳಿದರು.

ರಸ್ತೆ ದುರಸ್ತಿ, ಪೈಪ್‌ಲೈನ್ ಸೋರಿಕೆ, ಬೀದಿದೀಪ ಸರಿಪಡಿಸುವುದು ಮತ್ತು ಇತರ ನಾಗರಿಕ ಸಮಸ್ಯೆಗಳಿಗೆ ಕಾರ್ಪೊರೇಟರ್ ಮೊದಲು ಸ್ಪಂದಿಸುತ್ತಾರೆ. ತಲಾ ಏಳರಿಂದ ಎಂಟು ವಾರ್ಡ್‌ಗಳನ್ನು ಹೊಂದಿರುವ ತಮ್ಮ ಕ್ಷೇತ್ರಗಳನ್ನು ಶಾಸಕರು ಸೂಕ್ಷ್ಮವಾಗಿ ನಿರ್ವಹಿಸಲು ಸಾಧ್ಯವಿಲ್ಲ. 2020ರ ಸೆಪ್ಟೆಂಬರ್ 11ರಿಂದ ಪಾಲಿಕೆ ಖಾಲಿಯಾಗಿರುವುದರಿಂದ ಕೆಲವು ಮಾಜಿ ಕಾರ್ಪೊರೇಟರ್‌ಗಳು ಮುಂದಿನ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನದ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಧನರಾಜ್ ತಿಳಿಸಿದ್ದಾರೆ.

ಪಾಲಿಕೆ ಮೇಲೆ ಹಿಡಿತ ಹೊಂದಿರುವ ಶಾಸಕರು ಚುನಾವಣೆ ವಿಳಂಬ ಮಾಡುತ್ತಿದ್ದಾರೆ ಎಂದು ಈ ಹಿಂದೆ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆಲವು ಹಿರಿಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಪೊರೇಟರ್ ಅನುಪಸ್ಥಿತಿಯಲ್ಲಿ ಶಾಸಕರು ಅನುದಾನ ಬಿಡುಗಡೆ ಮತ್ತು ಬಳಕೆಯ ಮೇಲೆ ನೇರ ಹಿಡಿತಹೊಂದಿರುತ್ತಾರೆ, ಆದ್ದರಿಂದ ನಗರದ ಯಾವುದೇ ಶಾಸಕರು ಬಿಬಿಎಂಪಿ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕೆಂದು ಬಯಸಲಿಲ್ಲ. ಹೊಸ ಸರ್ಕಾರ ಕೂಡ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಮಾಜಿ ಕಾರ್ಪೊರೇಟರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com