ವಿದ್ಯುತ್ ಕಂಬಗಳು
ವಿದ್ಯುತ್ ಕಂಬಗಳು

ಗಾಳಿ- ಮಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 546 ವಿದ್ಯುತ್ ಕಂಬಗಳು ಧರೆಗೆ!

ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ-ಮಳೆಗೆ 546 ವಿದ್ಯುತ್ ಕಂಬಗಳು ಧರೆಗುರುಳಿವೆ. ದುರಸ್ಥಿ ಕಾರ್ಯ ಭರದಿಂದ ಸಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ.  
Published on

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ-ಮಳೆಗೆ 546 ವಿದ್ಯುತ್ ಕಂಬಗಳು ಧರೆಗುರುಳಿವೆ. ದುರಸ್ಥಿ ಕಾರ್ಯ ಭರದಿಂದ ಸಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ. ಭಾರೀ ಮಳೆ-ಗಾಳಿಗೆ ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಂಡಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿರುವ ಪ್ರದೇಶಗಳಲ್ಲಿ ವಿದ್ಯುತ್ ಮರು ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. 

ಶನಿವಾರ  ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಭಾಗಗಳಲ್ಲಿ 142 ಕಂಬಗಳು ಮುರಿದ್ದಿದ್ದು ಹಾಗು 20 ಟಿಸಿಗಳು ಹಾನಿಗೊಳಗಾಗಿವೆ. ಹಾಗೆಯೇ ಭಾನುವಾರ 404 ಕಂಬಗಳು ಮುರಿದ್ದಿದ್ದು, 44 ಟಿಸಿಗಳು ಹಾಗೂ 9 ಡಬಲ್ ಪೋಲ್ ಸ್ಟ್ರಕ್ಚರ್ ಗಳು ಹಾನಿಗೊಳಗಾಗಿವೆ. ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು, ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಪ್ರದೇಶದಲ್ಲಿ ಭಾರೀ ಗಾಳಿಗೆ ಮರಗಳು ವಿದ್ಯುತ್‌ ತಂತಿ ಮೇಲೆ ಬಿದ್ದಿದ್ದು, ಅವುಗಳ ತೆರವು ಕಾರ್ಯ ಮಾಡಲಾಗಿದೆ ಎಂದು ಬೆಸ್ಕಾಂ ಎಂಡಿ ಮಾಹಿತಿ ನೀಡಿದ್ದಾರೆ.  

ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರದ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜನಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ,  ಆರ್. ಆರ್. ನಗರ, ಪೀಣ್ಯ ಸೇರಿದಂತೆ ಮತ್ತಿತ್ತರ ಪ್ರದೇಶಗಳಲ್ಲಿ, ಬೆಸ್ಕಾಂನ ಗ್ರಾಮಾಂತರ  ವ್ಯಾಪ್ತಿಯ ತುಮಕೂರು, ಮಾಲೂರು, ಸರ್ಜಾಪುರ, ಚಂದಾಪುರ, ಶೀಡ್ಲಘಟ್ಟ, ಕೆಜಿಎಫ್, ಕೈವಾರ, ಮಧುಗಿರಿ, ಪಾವಗಡ, ಹಿರಿಯೂರು, ಚಿಂತಾಮಣಿ, ತಿಪಟೂರು, ರಾಮನಗರ ಸೇರಿದಂತೆ ಮತ್ತಿತರ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರ ಹಾಗೂ ಕೊಂಬೆಗಳನ್ನು ತೆರವುಗೊಳಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆ ಮಾಡಲಾಗಿದೆ. ಮುರಿದಿರುವ ಕಂಬಗಳ ಬದಲಾವಣೆ ಮಾಡಿ ಶೀಘ್ರ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸಹಾಯವಾಣಿಗೆ ದೂರುಗಳ ಸುರಿಮಳೆ: ಭಾನುವಾರ ಒಟ್ಟು 44,784 ಕರೆಗಳು ಬೆಸ್ಕಾಂ ಸಹಾಯವಾಣಿ 1912 ಕ್ಕೆ ಬಂದಿದ್ದು, ಈ ಪೈಕಿ 22,249 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಹಾಗೆಯೇ ಪ್ರತಿ 1 ಗಂಟೆ ಅವಧಿಯಲ್ಲಿ ಸರಾಸರಿ 1691 ಕರೆಗಳು ಬಂದಿದ್ದು, 779 ದೂರುಗಳು ದಾಖಲಾಗಿವೆ. ಹೆಚ್ಚಿನ ಕರೆಗಳು ಗಾಳಿ- ಮಳೆಯಿಂದಾಗಿ ವಿದ್ಯುತ್‌ ವ್ಯತ್ಯಯಕ್ಕೆ ಸಂಬಂದಿಸಿದ್ದಾಗಿದೆ. ವಿದ್ಯುತ್‌ ಅವಘಡ ಮತ್ತು ಅಪಘಾತ ತಡೆಗೆ ಸಹಾಯವಾಣಿ ಎಚ್ಚರದಿಂದ  ಕಾರ್ಯನಿರ್ವಹಿಸುತ್ತಿದ್ದು, ದೂರುಗಳನ್ನು ದಾಖಲಿಸಿಕೊಂಡು ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com