ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾಗರಿಕರು ಮತ್ತು ಪೇದೆಗಳು ಕೇಂದ್ರ ಬಿಂದುವಾಗಿರಬೇಕು ಎಂದು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ತಿಳಿಸಿದರು
ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ರಾಜ್ಯ ಸೇವೆಯಿಂದ ಬಿಡುಗಡೆಯಾದರು. ಈ ಸಂದರ್ಭದಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ಪ್ರತಿಯೊಬ್ಬ ಐಪಿಎಸ್ ಅಧಿಕಾರಿಗೆ ನಾಯಕತ್ವ ಮೂಲಗುಣ ಎಂಬುದು ನೆನಪಿರಬೇಕು. ಐಪಿಎಸ್ ಅಧಿಕಾರಿಗಳು ಇಲಾಖೆಯ ಸುಧಾರಣೆಗಾಗಿ ಯಾವುದೇ ನಿರ್ದಿಷ್ಟಹುದ್ದೆಯನ್ನು ಅಲಂಕರಿಸಲು ಕಾಯಬಾರದು. ಜಿಲ್ಲಾ ವರಿಷ್ಠಾಧಿಕಾರಿ, ಆಯುಕ್ತರು ಅಥವಾ ಮಹಾನಿರ್ದೇಶಕರ ಹುದ್ದೆಯನ್ನೇರಿದರೆ ಮಾತ್ರ ಬದಲಾವಣೆ ಸಾಧ್ಯವೆಂದು ಕಾಯುತ್ತಾ ಕೂರುವುದು ಸಮಂಜಸವಲ್ಲ.
ಪೊಲೀಸ್ ಪಡೆಯ ಸುಧಾರಣೆಗೆ ಪ್ರತಿಯೊಂದು ಹುದ್ದೆಯು ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಮಾಧ್ಯಮಗಳು ಕೆಲವೊಂದು ಹುದ್ದೆಗಳನ್ನು ಎಲ್ಲರ ಹುಬ್ಬೇರುವಂತೆ ವರ್ಣರಂಜಿತವಾಗಿ ಬಿಂಬಿಸುತ್ತವೆ. ಆದರೆ ಇನ್ನುಳಿದ ಹುದ್ದೆಗಳು ಕೇವಲ ಅಧೀನ ಸಿಬ್ಬಂದಿಯ ನಿಶ್ಯಬ್ದ ಹೊಗಳಿಕೆಗೆ ಪಾತ್ರವಾಗುತ್ತವೆ. ನಿಜವಾಗಿ ಅಷ್ಟೇನೂ ಮಹತ್ವವಲ್ಲದ ಹುದ್ದೆಗಳಲ್ಲಿ ವ್ಯವಸ್ಥೆಯ ಬದಲಾವಣೆಗೆ ಉತ್ತಮ ಅವಕಾಶ ಲಭಿಸುತ್ತದೆ. ಮಾಧ್ಯಮದವರು ಇದನ್ನು ಗಮನಿಸಲಾರರು. ಆದರೆ, ವೀಕ್ಷಕನಾಗಿ ಸಾಮಾನ್ಯ ಕಾನ್ಸ್‌ಟೇಬಲ್ ಇದನ್ನು ಗುರುತಿಸಲು ಶಕ್ತನಾಗಿರುತ್ತಾನೆ. ಇವರೇ ಅಧಿಕಾರಿಗಳ ಕಾರ್ಯವೈಖರಿಯ ನಿಜವಾದ ತೀರ್ಪುಗಾರರು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.
ಹಳೆಯ ವಾಹನಗಳು, ಶಿಥಿಲಗೊಂಡ ಕಟ್ಟಡಗಳು, ಹಳೆಯ ದಾಖಲೆಗಳು, ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ, ಇದರಿಂದ ಬೊಕ್ಕಸಕ್ಕೆ ಹಣ ಬಂದಿದೆ. ಕಸ ತೆಗೆಯುವುದು ಕೇವಲ ಭೌತಿಕ ಕಸಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಮಯ ಮತ್ತು ಉಪಯುಕ್ತತೆಯ ಪರೀಕ್ಷೆಯನ್ನು ಮೀರಿದ ಹಳೆಯ ಕಾರ್ಯವಿಧಾನಗಳು, ಅಭ್ಯಾಸಗಳು ಮತ್ತು ಪ್ರೋಟೋಕಾಲ್‌ಗಳನ್ನು ಮೌನವಾಗಿ ಸಮಾಧಿ ಮಾಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು 37 ವರ್ಷ ರಾಜ್ಯದಲ್ಲಿ ಸೇವೆ ನಿರ್ವಹಿಸಿದ್ದೇನೆ. ಕರ್ನಾಟಕದ ಜನತೆ ನನಗೆ ಬಹಳ ಸಹಾಯ ಮಾಡಿದ್ದಾರೆ. ಇದೇ ನನ್ನ ಜನ್ಮಭೂಮಿ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಲು ಕುಟುಂಬದ ಪಾತ್ರ ಬಹಳ ಇದೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಕಾನ್ಸ್‌ಟೇಬಲ್‌ನಿಂದ ಡಿಜಿವರೆಗೆ ನನ್ನ ಪ್ರತಿಯೊಬ್ಬ ಸಹೋದ್ಯೋಗಿಗಳ ನಿರಂತರ ಬೆಂಬಲದಿಂದಾಗಿ ನಾನು ಈ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಕೆಲವೊಮ್ಮೆ ಅಧಿಕಾರದ ಉತ್ತುಂಗದಲ್ಲಿದ್ದರೂ ಒಂಟಿತನ ಅನುಭವಿಸಿದ್ದೇನೆ ಎಂದು ಬರೆದಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ನನ್ನ ಹೃದಯ ಸದಾ ತೆರೆದಿರುತ್ತದೆ, ಆರಂಭದಲ್ಲಿ ನಾನು 45 ಚದರ ಅಡಿ ಮನೆಯಲ್ಲಿ ವಾಸಿಸುತ್ತಿದ್ದೆ, ನಾನು 3 ಎಕರೆ ಜಾಗದ ಮನೆಯಲ್ಲಿ ಜೀವನ ನಡೆಸುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ನನ್ನ ವೃತ್ತಿ ಜೀವನವನ್ನು ಅತ್ಯಂತ ತೃಪ್ತಿದಾಯಕವಾಗಿ ಕಳೆದಿದ್ದೇನೆ.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ರಸ್ತೆಯಲ್ಲಿ ನಿಂತು ಹಗಲಿರುಳು ಕೆಲಸ ನಿರ್ವಹಿಸುತ್ತಾರೆ. ಪೊಲೀಸರು ಸಹ ಎಲ್ಲಾ ಇಲಾಖೆಯ ಉದ್ಯೋಗಿಗಳಂತೆ ರಜಾ ತೆಗೆದುಕೊಳ್ಳಬಹುದಿತ್ತು. ಆದರೆ ಸಿಬ್ಬಂದಿ ಆ ರೀತಿ ಮಾಡುವುದಿಲ್ಲ. ದಿನದ 24 ಗಂಟೆಯೂ ಕರ್ತವ್ಯದಲ್ಲಿರುತ್ತಾರೆ.
ಪೊಲೀಸ್ ಕುಟುಂಬದ ಸದಸ್ಯರಿಗೂ ಸಹ ಒತ್ತು ನೀಡಲಾಗುತ್ತದೆ. ಯಾವುದೇ ಅಭಿವೃದ್ಧಿ ಕೈಗೊಳ್ಳಬೇಕಾದರೂ ಕುಟುಂಬ ಸದಸ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ನೆರವಾಗಬೇಕು. ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಪೊಲೀಸರು ಯಾವುದೇ ನಿರ್ಧಾರ ಕೈಗೊಂಡರೂ ನಾಗರಿಕರಿಗೂ ಕೇಂದ್ರ ಬಿಂದುವಾಗುವ ರೀತಿ ಯೋಜನೆ ರೂಪಿಸಲಾಗುವುದು. ನಾವು ಕೈಗೊಂಡ ಹಲವು ಕಾರ್ಯಗಳ ಫಲಗಳು ನಾಗರಿಕರಿಗೂ ಸಿಕ್ಕಿವೆ.
ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳಬೇಕಾದರೂ ಎಲ್ಲರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ನಿರ್ಧಾರ ಕೈಗೊಂಡಿದ್ದೇನೆ. ತಮಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ನೆರವು ನೀಡಿದಂತಹ ಎಲ್ಲಾ ಹಿರಿಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ನಿಮ್ಮಲ್ಲಿ ಯಾರಿಗಾದರೂ ನನ್ನಿಂದ ದುಃಖ ಮತ್ತು ನೋವುಂಟಾಗಿದ್ದರೇ ಕ್ಷಮೆಯಿರಲಿ, ಏಕಂದರೆ ಅದನ್ನು ನಾನು ಉದ್ದೇಶಪೂರ್ವಕವಾಗಿ ಮಾಡಿಲ್ಲ, ಪ್ರತಿಯೊಬ್ಬ ಮನುಷ್ಯನಂತೆ ನನಗೂ ತನ್ನದೇ ಆದ ಮಿತಿಗಳು ಮತ್ತು ವೈಫಲ್ಯಗಳಿವೆ ಎಂದು ಒಪ್ಪಿಕೊಂಡರು.
ಕರ್ನಾಟಕ ನನ್ನ ಜನ್ಮಭೂಮಿ (ಜನ್ಮಭೂಮಿ) ಅಲ್ಲದಿರಬಹುದು ಆದರೆ ನನ್ನ ಕರ್ಮಭೂಮಿ. ಎರಡು ವರ್ಷಗಳ ನಂತರ ಕನ್ನಡನಾಡಿಗೆ ಮರಳುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಸೂದ್ ಪತ್ರದಲ್ಲಿ ಬರೆದಿದ್ದಾರೆ.
ಹೊಸದಾಗಿ ಡಿಜಿಪಿಯಾಗಿ ನೇಮಕಗೊಂಡಿರುವ ಅಲೋಕ್ ಮೋಹನ್ ಅವರಿಗೂ ನನಗೆ ಕೊಟ್ಟಂತಹ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ಅವರಿಗೂ ನೀಡುತ್ತೀರೆಂಬ ವಿಶ್ವಾಸ ಇದೆ. ಅವರು ಸಹ ಹೆಚ್ಚಿನ ಅಭಿವೃದ್ಧಿ ಮಾಡಿ ತೋರಿಸುತ್ತಾರೆ. ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
Advertisement