ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಆಗಲ್ಲ; RSS, ಬಜರಂಗ ದಳ ಬ್ಯಾನ್ ಬಗ್ಗೆ ಚರ್ಚೆಯೇ ನಡೆದಿಲ್ಲ: ಸಚಿವ ಪರಮೇಶ್ವರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರು RSS ಬ್ಯಾನ್ ಮಾಡುತ್ತೇವೆ, ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ನೇರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರೆ, ಇತ್ತ ಸಚಿವ ಜಿ. ಪರಮೇಶ್ವರ್ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
Published: 25th May 2023 04:01 PM | Last Updated: 25th May 2023 09:06 PM | A+A A-

ಪರಮೇಶ್ವರ್
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರು RSS ಬ್ಯಾನ್ ಮಾಡುತ್ತೇವೆ, ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ನೇರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರೆ, ಇತ್ತ ಸಚಿವ ಜಿ. ಪರಮೇಶ್ವರ್ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್‌ಐಗೆ ಸಂಬಂಧಿಸಿದಂತೆ ಹೇಳಿದ್ದೆವು. ಒಂದು ವೇಳೆ ಅವರು ಶಾಂತಿಗೆ ಭಂಗ ತಂದರೆ, ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ, ಅಗತ್ಯವಿದ್ದರೆ ಅವರನ್ನು ನಿಷೇಧಿಸುವ ಮಟ್ಟಕ್ಕೂ ಹೋಗುತ್ತೇವೆ ಎಂದು ಹೇಳಿದ್ದೇವು. ಅದನ್ನು ಬಿಟ್ಟರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿರಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ.
ಮತಾಂತರ ಮತ್ತು ಗೋಹತ್ಯೆ ತಡೆ ಕಾನೂನುಗಳನ್ನು ಹಿಂಪಡೆಯುವ ಕುರಿತು ಕೇಳಿದ ಪ್ರಶ್ನೆಗೆ, ಸಮಾಜಕ್ಕೆ ವಿರುದ್ಧವಾದ, ಸಮಾಜದಲ್ಲಿ ಶಾಂತಿ ಕದಡುವ ಎಲ್ಲವೂ, ಜನವಿರೋಧಿ, ಅದು ಶಾಸನಗಳು ಅಥವಾ ನಿಯಮಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಾಂತಿ ಕದಡಿದರೆ ಭಜರಂಗ ದಳ, ಆರ್‌ಎಸ್‌ಎಸ್ ಗೂ ನಿಷೇಧ; ಬಿಜೆಪಿ ಜಾರಿಗೆ ತಂದಿದ್ದ ಮಸೂದೆಗಳು ವಾಪಸ್: ಪ್ರಿಯಾಂಕ್ ಖರ್ಗೆ
ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿಲ್ಲ. ಖಾತೆ ಹಂಚಿಕೆ ಆದ ಮೇಲೆ, ಯಾರು ಸಚಿವರಾಗುತ್ತಾರೋ ಅವರು ನಿಷೇಧ ವಿಷಯಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ನಂತರ ಸಂಪುಟದಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.