ಮಾನವೀಯತೆ ಮರೆತ ಕಿದ್ವಾಯಿ: ಚಿಕಿತ್ಸೆಗಾಗಿ ಲಂಚ, ಔಷಧಿಗಳಿಗೆ ಹಣ; ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ!

ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ‌ ನಿರ್ಲಕ್ಷಕ್ಕೆ ಬಡ ಜೀವಗಳು ಅಸುನೀಗುತ್ತಿವೆ. ಆಸ್ಪತ್ರೆಗೆ ಬರುವ ಜನರಿಗೆ ಸರಿಯಾದ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಐಸಿಯು ನಲ್ಲಿ ಡಾಕ್ಟರ್ಸ್ ಇರೋದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ‌ ನಿರ್ಲಕ್ಷಕ್ಕೆ ಬಡ ಜೀವಗಳು ಅಸುನೀಗುತ್ತಿವೆ. ಆಸ್ಪತ್ರೆಗೆ ಬರುವ ಜನರಿಗೆ ಸರಿಯಾದ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಐಸಿಯು ನಲ್ಲಿ ಡಾಕ್ಟರ್ಸ್ ಇರೋದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಆಸ್ಪತ್ರೆಯಲ್ಲಿನ ಸಿಬ್ಬಂದಿ ಮತ್ತು ವೈದ್ಯರು ಪ್ರಭಾವಿ ವ್ಯಕ್ತಿಗಳು ಮತ್ತು ಲಂಚಕೋರರಿಗೆ ಆದ್ಯತೆಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉಚಿತ ಔಷಧಗಳನ್ನು ನೀಡಬೇಕಾದ ಆಸ್ಪತ್ರೆಯಲ್ಲಿ ಸದಾ ಕೊರತೆಯಿದ್ದು, ಹೊರಗಿನಿಂದ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ .ವೈದ್ಯಕೀಯ ವರದಿಗಳನ್ನು ನೀಡಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅವರು ದೂರಿದ್ದಾರೆ.

ನೀವು ಹೆಚ್ಚಿನ ರಾಜಕೀಯ ಪ್ರಭಾವವನ್ನು ಹೊಂದಿದ್ದರೆ ಅಥವಾ ದಾದಿಯರು ಮತ್ತು ವೈದ್ಯರ ಕೈ ಬಿಸಿ ಮಾಡಿದರೆ ಮಾತ್ರ ನೀವು ತಕ್ಷಣ ಚಿಕಿತ್ಸೆ ಪಡೆಯಬಹುದು. ಇಲ್ಲದಿದ್ದರೆ ನೀವು ಕಾಯಬೇಕಾಗುತ್ತದೆ. ಬಾಯಿಯ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ನಾನು ಸುಮಾರು 2 ತಿಂಗಳು ಕಾಯುತ್ತಿದ್ದೆ. ಅಲ್ಲದೆ, ಆಸ್ಪತ್ರೆಯಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಿದೆ ರೋಗಿಯೊಬ್ಬರು  ದೂರಿದ್ದಾರೆ.

7,400 ಇದ್ದ ಪಿಇಟಿ ಸಿಟಿ ಸ್ಕ್ಯಾನ್ ದರ ಈಗ 9,000 ಆಗಿರುವುದು ರೋಗಿಗಳ ಆತಂಕಕ್ಕೆ  ಕಾರಣವಾಗಿದೆ. ಜನರು ಪಾವತಿಸಲು ಸಿದ್ಧರಿದ್ದರೂ, ಸ್ಕ್ಯಾನ್ ವರದಿಗಳು ಒಂದು ತಿಂಗಳು ವಿಳಂಬವಾಗುತ್ತವೆ, ಖಾಸಗಿ ಕೇಂದ್ರಗಳಲ್ಲಿ ಪಿಇಟಿ ಸಿಟಿ ಸ್ಕ್ಯಾನ್ ಪಡೆಯಲು ವೈದ್ಯರು ರೋಗಿಗಳನ್ನು ರೆಫರ್ ಮಾಡುತ್ತಾರೆ, ಅಲ್ಲಿ ಸುಮಾರು 35,000 ರೂ. ಹಣ ಕಟ್ಟಬೇಕು.

ಆಸ್ಪತ್ರೆ ಆವರಣದ ಬಳಿ ಕಸದ ರಾಶಿ ಮತ್ತು ಎಂಎನ್‌ಸಿಯಿಂದ ನೀಡಲಾದ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಇತರ ದೂರುಗಳು ಸಹ ಕೇಳಿಬಂದವು. ಇನ್ನೊಂದು ವಸತಿ ನಿಲಯ - ವೆಂಕಟೇಶ್ವರ ಧರ್ಮಶಾಲೆಯನ್ನು  ನವೀಕರಣಕ್ಕಾಗಿ ಆರು ತಿಂಗಳ ಹಿಂದೆ ಮುಚ್ಚಲಾಗಿದೆ - ಇದುವರೆಗೆ ತೆರೆಯದ ಕಾರಣ ಜನರು ಆಸ್ಪತ್ರೆ ಹೊರಗೆ ವಿಶ್ರಾಂತಿ ಪಡೆಯಬೇಕಾಗಿದೆ.

ಚಿಕಿತ್ಸೆಗಳು ಏಕೆ ವಿಳಂಬವಾಗುತ್ತಿವೆ ಎಂಬುದಕ್ಕೆ ಉತ್ತರಿಸಿದ ಕಿದ್ವಾಯಿ ನಿರ್ದೇಶಕ ಡಾ ಲೋಕೇಶ್ ವಿ, ನಾವು ಪ್ರತಿದಿನ 1,000 ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಬೇಕು. ಹೀಗಾಗಿ ನಾವು ರೋಗಿಗಳ ತ್ವರಿತ ನೋಂದಣಿಯನ್ನು ಪರಿಚಯಿಸಿದ್ದೇವೆ. ಆಸ್ಪತ್ರೆಯಲ್ಲಿ ಸೇವೆಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಇದು ಅನುಷ್ಠಾನಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಟೆಂಡರ್ ಕರೆಯಲು ಸಾಧ್ಯವಾಗದ ಕಾರಣ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ನಾವು ಒಪ್ಪುತ್ತೇವೆ ಎಂದಿದ್ದಾರೆ.

ಪಿಇಟಿ ಸಿಟಿ ಸ್ಕ್ಯಾನ್‌ಗೆ ಖಾಸಗಿ ಬಿಡ್‌ದಾರರಿಂದ ರೂ 9,000 ಶುಲ್ಕ ವಿಧಿಸಲಾಗುತ್ತದೆ ಮತ್ತು ಅದನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸೇರಿಸಲು ಕಿದ್ವಾಯಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದನ್ನು ಉಚಿತವಾಗಿ ನೀಡಬಹುದು ಎಂದು ಅವರು ಹೇಳಿದರು.

ವೆಂಕಟೇಶ್ವರ ಧರ್ಮಶಾಲೆ ಮುಚ್ಚಿರುವ ಕುರಿತು ಡಾ.ಲೋಕೇಶ್ ಮಾತನಾಡಿದ ಅವರು, ಹಣದ ಕೊರತೆಯಿಂದ ಸ್ಥಗಿತಗೊಂಡಿರುವ ನವೀಕರಣ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಮನೆಗೆಲಸದ ಸಿಬ್ಬಂದಿ ಕೊರತೆಯಿಂದ ಸ್ವಚ್ಛತೆಯ ಕೊರತೆ ಮತ್ತು ಕಸದ ಶೇಖರಣೆಯಾಗುತ್ತಿದೆ ಎಂದು ಅವರು ಹೇಳಿದರು. ಸಂದರ್ಶಕರು ಮತ್ತು ರೋಗಿಗಳಿಗೆ ನಾಗರಿಕ ಪ್ರಜ್ಞೆಯ ಕೊರತೆಯಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com