ಕಾಂತರಾಜು ಆಯೋಗದ ಜಾತಿಗಣತಿ ಸಮೀಕ್ಷೆ ಅವೈಜ್ಞಾನಿಕ: ವರದಿ ತಿರಸ್ಕರಿಸಲು ಒಕ್ಕಲಿಗ ಸಭೆಯಲ್ಲಿ ನಿರ್ಣಯ

ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ದಪಡಿಸಲಾಗಿರುವ 'ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ಒಕ್ಕಲಿಗ ಸಮುದಾಯದ ಸಭೆ ನಿರ್ಧರಿಸಿದೆ.
ಜಾತಿ ಗಣತಿ ವರದಿ ತಿರಸ್ಕರಿಸಲು ಒಕ್ಕಲಿಗರ ಸಭೆಯಲ್ಲಿ ನಿರ್ಧಾರ
ಜಾತಿ ಗಣತಿ ವರದಿ ತಿರಸ್ಕರಿಸಲು ಒಕ್ಕಲಿಗರ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ದಪಡಿಸಲಾಗಿರುವ 'ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ಒಕ್ಕಲಿಗ ಸಮುದಾಯದ ಸಭೆ ನಿರ್ಧರಿಸಿದೆ.

ಗುರುವಾರ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಈ‌ ನಿರ್ಧಾರ ಕೈಗೊಳ್ಳಲಾಗಿದೆ.

ಸಾಮಾಜಿಕ, ಆರ್ಥಿಕ ಸಮೀಕ್ಷೆ ಲೋಪ - ದೋಷಗಳಿಂದ ಕೂಡಿದ್ದು, ಎಚ್.ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲ. ಶಂಕಾಸ್ಪದ ಮತ್ತು ತಪ್ಪು ಮಾಹಿತಿಯಿಂದ ಕೂಡಿರುವ ವರದಿ ಅಂಗೀಕರಿಸಿದರೆ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ.

ಹೀಗಾಗಿ, ಪಕ್ಷಾತೀತ ವಾಗಿ ಎಲ್ಲ ಒಕ್ಕಲಿಗ ಶಾಸಕರು, ನಾಯಕರು, ಸ್ವಾಮೀಜಿಗಳು ಸೇರಿ ಒಂದು ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿಯನ್ನು ಸ್ವೀಕರಿಸದಂತೆ ಒತ್ತಡ ಹೇರಲು ನಿರ್ಧಾರ ಕೈಗೊಳ್ಳಲಾಯಿತು.

ಹಿಂದಿನ ಅವಧಿಯಲ್ಲಿ ಒಕ್ಕಲಿಗ ಸರ್ಕಾರದ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಹೊರಡಿಸಿದ್ದ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂದು ಒಕ್ಕಲಿಗೆ ಸಮುದಾಯದ ನಾಯಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ನಿರ್ಧರಿಸಿದ್ದಾರೆ.

ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಶಾಸಕರಾದ ಸಿ.ಎನ್.ಅಶ್ವತ್ಥನಾರಾಯಣ,ಎಸ್.ಟಿ.ಸೋಮಶೇಖರ್, ಆರಗ ಜ್ಞಾನೇಂದ್ರ, ಡಾ.ಎಚ್‌.ಡಿ.ರಂಗನಾಥ್, ದಿನೇಶ್‌ ಗೂಳಿಗೌಡ ಮುಂತಾದವರು ಭಾಗವಹಿಸಿದ್ದರು.

ಮೀಸಲಾತಿಯನ್ನು ಶೇ.12ರಿಂದ 16ಕ್ಕೆ ಹೆಚ್ಚಳ ಮಾಡುವಂತೆ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ವಪಕ್ಷಗಳ ಶಾಸಕರು, ಸ್ವಾಮಿಗಳು ಸೇರಿದಂತೆ ಸಮಾಜದ ಮುಖಂಡರ ನಿಯೋಗ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಜಾತಿ ಗಣತಿಯಲ್ಲಿ ಸಾಕಷ್ಟು ದೋಷಗಳಿವೆ, ಜಾತಿಗಣತಿಯನ್ನು ಮತ್ತೆ ಮಾಡುವಂತೆ ಒತ್ತಾಯಿಸಿಸುವುದಾಗಿ ನಿರ್ಧಾರ ಕೈಗೊಂಡಿದ್ದಾರೆ.

ಕಾಂತರಾಜು  ಆಯೋಗದ  ಗಣತಿ ವರದಿಯಲ್ಲಿ ಹಲವು ವ್ಯಕ್ತಿಗಳನ್ನು ಕೈ ಬಿಟ್ಟಿದ್ದು, ಶೇ.40-50ರಷ್ಟು ಜನರನ್ನು ಸೇರಿಸಿಕೊಂಡಿಲ್ಲ ಎಂದು ಒಕ್ಕಲಿಗ ಮುಖಂಡರು ಆತಂಕ ವ್ಯಕ್ತಪಡಿಸಿದರು. ಜಾತಿಗಣತಿಯಿಂದ ಅನೇಕ ಗ್ರಾಮಗಳು,  ನಗರ ಕೇಂದ್ರಗಳಲ್ಲಿನ ಮನೆಗಳನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದ್ದಾರೆ. ಸಮಾನಾಂತರವಾಗಿ ಒಕ್ಕಲಿಗ ಜಾತಿ ಗಣತಿಯನ್ನು ಕೈಗೊಳ್ಳಬೇಕು ಎಂದು ಒಕ್ಕಲಿಗ ಮುಖಂಡರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com