
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳನಲ್ಲಿ ಸಲ್ಲಿಸಲಿದ್ದು, ಆಯೋಗದ ಸಲ್ಲಿಸಿದ ವರದಿಯನ್ನು ಸ್ವೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭರವಸೆ ನೀಡಿದರು,
ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ನಗರದ ಡಿ. ದೇವರಾಜ ಅರಸು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೇರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಲಿದ್ದಾರೆ. ಅದನ್ನು ನಮ್ಮ ಸರ್ಕಾರ ಸ್ವೀಕರಿಸುತ್ತದೆ ಎಂದು ಹೇಳಿದರು.
‘ಹಿಂದಿನ ಬಾರಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಡೀ ದೇಶದಲ್ಲಿ ಜಾತಿ ಗಣತಿ ಮೊದಲು ಮಾಡಿದ್ದು ನಮ್ಮ ಸರ್ಕಾರ. ನಿಖರವಾಗಿ ಪ್ರತಿ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿ ತಿಳಿಯುವ ಉದ್ದೇಶದಿಂದ ಜಾತಿವಾರು ಜನಗಣತಿ ಮಾಡಿಸಿದ್ದೆ. ನಂತರ ಬಂದ ಸರ್ಕಾರಗಳು ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಲಿಲ್ಲ’ ಎಂದು ತಿಳಿಸಿದರು.
ಇಡೀ ದೇಶದಲ್ಲಿ ಜಾತಿ ಗಣತಿ ನಡೆಸಿದ ಮೊದಲ ಸರ್ಕಾರ ನಮ್ಮ ಸರ್ಕಾರ. ಪ್ರತಿ ಜಾತಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಜಾತಿ ಗಣತಿ ಆರಂಭಿಸಲಾಗಿತ್ತು. ಆದರೆ, ''ಹಿಂದಿನ ಸರಕಾರಗಳು ಈ ವರದಿಯನ್ನು ಒಪ್ಪಿರಲಿಲ್ಲ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ನೀಡುವ ಜಾತಿ ಗಣತಿ ವರದಿಯನ್ನು ನಾವು ಸ್ವೀಕರಿಸುತ್ತೇವೆ ಎಂದರು.
ಇದೇ ವೇಳೆ ಎಲ್ಲರೂ ಸಮಾಜಕ್ಕಾಗಿ ಶ್ರಮಿಸಬೇಕು. ಕಠಿಣ ಪರಿಶ್ರಮ ಮತ್ತು ಗುರಿಗಳನ್ನು ಹೊಂದಿಸದೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತ ಉಪಖಂಡಕ್ಕೆ ಬ್ರಿಟಿಷರು ಆಗಮಿಸುವ ಮೊದಲು, ‘ಶೂದ್ರ’ ಸಮುದಾಯಗಳಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು ಮತ್ತು ಹಿಂದುಳಿದ ಜಾತಿಗಳ ಹೆಣ್ಣು ಮಕ್ಕಳಿಗೂ ಶಿಕ್ಷಣಕ್ಕೆ ಪ್ರವೇಶವನ್ನು ನೀಡಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಶೂದ್ರ ಸಮುದಾಯ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡಿದರು. ಈ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಹಿಂದೆ ಗ್ರಾಮೀಣ ಭಾಗಗಳಲ್ಲಿ ವೈದ್ಯ ಹುದ್ದೆಗಳು ಹೆಚ್ಚಾಗಿದ್ದು ವೈದ್ಯರ ಸಂಖ್ಯೆ ಕಡಿಮೆ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಖಾಲಿ ಹುದ್ದೆಗಿಂತ ವೈದ್ಯರ ಸಂಖ್ಯೆ ದುಪ್ಪಟ್ಟಾಗಿದೆ. ಆದ್ದರಿಂದ ಖಾಲಿ ಇರುವ ಗ್ರಾಮೀಣ ವೈದ್ಯ ಹುದ್ದೆಗಳನ್ನಷ್ಟೇ ಭರ್ತಿ ಮಾಡಲು ನಿರ್ಧರಿಸಿ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ತಂದಿತು.
ಸಮುದಾಯದಿಂದ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎನ್ನುವುದು ಅವೈಜ್ಞಾನಿಕವಾಗಿದೆ. ವೈದ್ಯಕೀಯ ಕಾಲೇಜು ಮುನ್ನಡೆಸುವುದು ದುಬಾರಿಯಾಗುತ್ತದೆ. ಬಡವರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಿ ನೆರವಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ಯಾರಾ ಮೆಡಿಕಲ್ ಕಾಲೇಜುಗಳು, ಹಾಸ್ಟೆಲ್, ಐಟಿಐಗಳನ್ನು ಸಮಾಜದಿಂದ ಆರಂಭಿಸಿದರೆ ಬಡವರು ಮತ್ತು ಗ್ರಾಮೀಣ ಮಕ್ಕಳಿಗೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.
Advertisement