ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಅಕ್ರಮ ಆಸ್ತಿ ಪ್ರಕರಣ: ಸಿಬಿಐ ತನಿಖೆ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ನ.22ಕ್ಕೆ ಹೈಕೋರ್ಟ್ ವಿಚಾರಣೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಅನುಮತಿಯ ವಿರುದ್ಧ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 22ರಂದು ವಿಚಾರಣೆ ನಡೆಸಲಿದೆ.
Published on

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಅನುಮತಿಯ ವಿರುದ್ಧ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 22ರಂದು ವಿಚಾರಣೆ ನಡೆಸಲಿದೆ.

ಇನ್ನು ಸಿಬಿಐ ತನಿಖೆ ನಡೆಸಲು ಸರ್ಕಾರದ ಅನುಮತಿಗೆ ಹೈಕೋರ್ಟ್ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಇನ್ನು ಎರಡು ವಾರದಲ್ಲಿ ಅರ್ಜಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ಸಿಬಿಐ ಇಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠದ ಗಮನಕ್ಕೆ ತಂದಿದ್ದು ಇದರ ಬೆನ್ನಲ್ಲೇ ನ್ಯಾಯಾಲಯ ನವೆಂಬರ್ 22ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದೆ.

ಡಿಕೆ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ 2019ರ ಸೆಪ್ಟೆಂಬರ್ 25ರಂದು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಹೀಗಾಗಿ ಶಿವಕುಮಾರ್ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದರು. ಈ ತಡೆಯನ್ನು ರದ್ದುಪಡಿಸುವಂತೆ ಸಿಬಿಐ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ. ಆದರೆ ಈ ಪ್ರಕರಣವನ್ನು ಹೈಕೋರ್ಟ್ ನಲ್ಲೇ ಪ್ರಶ್ನಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿತ್ತು. ಅಲ್ಲದೆ ಎರಡು ವಾರಗಳಲ್ಲಿ ಅರ್ಜಿ ಮತ್ತು ಮೇಲ್ಮನವಿಯನ್ನು ಆಲಿಸಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಆದೇಶಿಸಿತ್ತು.

ಏಪ್ರಿಲ್ 2013 ರಿಂದ ಏಪ್ರಿಲ್ 2018 ರ ನಡುವೆ  ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಂದ ಸ್ವಾಧೀನಕ್ಕೆ ಪಡೆಯಲಾದ ಒಟ್ಟು ಮೌಲ್ಯವು 128 ಕೋಟಿಯಿಂದ 162 ಕೋಟಿಗೆ ಏರಿಕೆಯಾಗಿದೆ. ಇದು ಸುಮಾರು ಶೇ. 45 ಅಥವಾ ರೂ. 75 ಕೋಟಿಯಷ್ಟು ಏರಿಕೆಯಾಗಿದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com