ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ: ಯುಟಿ ಖಾದರ್
ಮಂಗಳೂರು: ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದು, ಈ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಕೊಡುವುದಾಗಿದೆ. ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಯಾರು ಆ ಪೀಠದಲ್ಲಿ ನನ್ನನ್ನು ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ.
ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದು ತಿಳಿಸಿದರು.
ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಜಮೀರ್ ಅವರು, ಭಾಷಣದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯುಟಿ ಖಾದರ್ ಅವರಿಗೆ ನಮಸ್ಕಾರ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ