
ಬೆಂಗಳೂರು: ನಗರದ ಹೊರವಲಯದ ಆನೇಕಲ್‌ನಲ್ಲಿ ಸೋಮವಾರ ವಯೋವೃದ್ಧ ಮಹಿಳೆಯೊಬ್ಬರ ಕತ್ತು ಸೀಳಿ ಚಿನ್ನದ ಸರ ದೋಚಿರುವ ಘಟನೆ ನಡೆದಿದೆ. ಆನೇಕಲ್‌ನ ಲಕ್ಷ್ಮಿ ಥಿಯೇಟರ್ ರಸ್ತೆಯಲ್ಲಿ ವಾಸವಾಗಿರುವ ಅಕ್ಕಯ್ಯಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಮಹಿಳೆ ಮತ್ತು ಆಕೆಯ ಪತಿ ನಾರಾಯಣಾಚಾರಿ ಸ್ಥಳೀಯ ತಂತ್ರಿಗಳಾಗಿದ್ದು, ಕಾಲು ಮತ್ತು ಕೈ ಮುರಿತ, ಸ್ನಾಯು ಸೆಳೆತಗಳಿಗೆ ಮಂತ್ರ ಪಠಣದ ಮೂಲಕ ಪರಿಹಾರ ಒದಗಿಸುತ್ತಾರೆ. ಇಂದು ಬೆಳಗ್ಗೆ ಆರೋಪಿಗಳು ಪರಿಹಾರ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಪೊಲೀಸರ ಪ್ರಕಾರ, ದರೋಡೆಕೋರನು ತನ್ನ ಕಾಲಿನ ಸ್ನಾಯು ಸೆಳೆತಕ್ಕೆ ಪರಿಹಾರ ಕೋರಿ ಶನಿವಾರ ಮಹಿಳೆಯನ್ನು ಭೇಟಿಯಾಗಿದ್ದನು.
ಸೋಮವಾರ ಮತ್ತೆ ಬಂದ ದರೋಡೆಕೋರ, ಸಂತ್ರಸ್ತೆಗೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ನೀಡುವಂತೆ ಒತ್ತಾಯಿಸಿ ಬಾಗಿಲು ಹಾಕಿಕೊಂಡಿದ್ದ. ಬೆಲೆಬಾಳುವ ವಸ್ತುಗಳನ್ನು ನೀಡಲು ಸಂತ್ರಸ್ತೆ ನಿರಾಕರಿಸಿದಾಗ ಆರೋಪಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಆಕೆ ಧರಿಸಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾನೆ.
ಮಹಿಳೆಯನ್ನು ರಕ್ಷಿಸಲು ಯತ್ನಿಸಿದ ಸಂತ್ರಸ್ತೆಯ ಪತಿ ಮೇಲೂ ದರೋಡೆಕೋರನು ಹಲ್ಲೆ ನಡೆಸಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿದರಾದರೂ ಆರೋಪಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿದೆ.
Advertisement