
ಬೆಂಗಳೂರು: ‘ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯನ್ನು ವೈಜ್ಞಾನಿಕವಾಗಿ ನಡೆಸಲಾಗಿದ್ದು, ಇದನ್ನು ಅವೈಜ್ಞಾನಿಕ ಎಂದು ಕರೆಯುವುದು ಸರಿಯಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಅವರು ಗುರುವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ನೋಡದೆ ಕಾಮೆಂಟ್ ಮಾಡುವುದು ತಪ್ಪು. ವರದಿ ಬಿಡುಗಡೆಗೂ ಮೊದಲೇ ನಿರ್ಣಯ ಮಾಡುವುದು ಆಗಬಾರದು ಎಂದಿದ್ದಾರೆ.
ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮುಖಂಡರು ವರದಿಯನ್ನು ಅವೈಜ್ಞಾನಿಕ ಮತ್ತು ಅಪೂರ್ಣ ಎಂದು ಆರೋಪಿಸಿದ್ದು, ಈ ವರದಿ ಒಪ್ಪಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2014ರಲ್ಲಿ ಎಚ್.ಕಾಂತರಾಜು ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗಣತಿಗೆ ಚಾಲನೆ ನೀಡಿತ್ತು. ವರದಿ ಇನ್ನೂ ಸರಕಾರಕ್ಕೆ ಸಲ್ಲಿಕೆಯಾಗಬೇಕಿದೆ.
ಸಮೀಕ್ಷೆ ವೇಳೆ ಆಸ್ತಿ, ಕೃಷಿ ಹಿಡುವಳಿ ಭೂಮಿ, ಜಾತಿ ಸೇರಿದಂತೆ 55 ಪ್ರಶ್ನೆಗಳನ್ನು ಕೇಳಿದ್ದೇವೆ. ಕಮಿಷನ್ ಮಾಡುವ ಕೆಲಸ ಸರ್ಕಾರದ ಆಸ್ತಿ ಎಂದು ಕಾಂತರಾಜು ತಿಳಿಸಿದ್ದಾರೆ.
ಆಯೋಗದ ಸದಸ್ಯ ಕಾರ್ಯದರ್ಶಿ ವರದಿಗೆ ಸಹಿ ಹಾಕದಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂತರಾಜು, ವರದಿಯನ್ನು ಸರ್ಕಾರಕ್ಕೆ ಕಳುಹಿಸುವ ಆಯೋಗದ ನಿರ್ಧಾರಕ್ಕೆ ಕಾರ್ಯದರ್ಶಿ ಸಹಿ ಹಾಕಿದ್ದಾರೆ ಮತ್ತು ಅದನ್ನು ಸರ್ಕಾರ ಒಪ್ಪಿಕೊಳ್ಳಬಹುದು ಎಂದು ಹೇಳಿದ್ದಾರೆ.
Advertisement