
ಬೆಂಗಳೂರು: ಊಹೆಗಳ ಆಧಾರದ ಮೇಲೆ ಜಾತಿ ಗಣತಿ ವರದಿ ವಿರೋಧಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜಾತಿ ಗಣತಿ ವರದಿ ಸಲ್ಲಿಕೆಯಾಗುವ ಮೊದಲೇ ಅದರ ಕುರಿತು ರಾಜ್ಯದಲ್ಲಿ ಚರ್ಚಿ ಶುರುವಾಗಿದೆ. ವರದಿಯಲ್ಲೇನಿದೆ ಎಂಬುದು ಅದನ್ನು ಬೇಡ ಎನ್ನುತ್ತಿರುವವರಿಗೂ ಗೊತ್ತಿಲ್ಲ. ಸುಮ್ಮನೆ ಊಹೆಗಳ ಆಧಾರದ ಮೇಲೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಇದೇ ವೇಳೆ ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಿದೆಯೇ? ಯಾರೇ ಆಗಲಿ ವಿಷಯ ಗೊತ್ತಿಲ್ಲದೆ ಮಾತನಾಡಬಾರದು. ಅವರದ್ದು ರಾಜಕೀಯ ಹೇಳಿಕೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಜಾತಿಗಣತಿ ವರದಿ ಸ್ವೀಕರಿಸಿದ್ದಾರೆ. ಹಾಗಿದ್ದರೆ ಅವರು ಸಮಾಜ ಒಡೆದಿದ್ದಾರೆಯೇ? ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದು ತಿಳಿಸಿದರು.
ಇನ್ನು, ಜಾತಿ ಜನಗಣತಿ ಮೂಲ ವರದಿ ಕಳೆದುಹೋಗಿದೆ ಎಂಬ ಹಿಂದುಳಿದ ವರ್ಗಗಳ ಆಯೋಗದ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ, ಅವರನ್ನು ಕರೆದು ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.
ಅರವಿಂದ್ ಲಿಂಬಾವಳಿ ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಅಧ್ಯಕ್ಷರ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ವಿ.ಸೋಮಣ್ಣ 6ನೇ ತಾರೀಖಿನ ನಂತರ ತಮ್ಮ ಅಭಿಪ್ರಾಯ ತಿಳಿಸುವ ಬಗ್ಗೆ ಹೇಳಿದ್ದಾರೆ. ಬಿಜೆಪಿಯಲ್ಲಿ ವಿಜಯೇಂದ್ರನನ್ನು ಅಧ್ಯಕ್ಷ ಹಾಗೂ ಆರ್.ಅಶೋಕ್ ರನ್ನು ಪ್ರಕ್ಪದ ನಾಯಕರಾಗಿ ನೇಮಿಸಿದ ಮೇಲೆ ಬೆಂಕಿ ಹತ್ತಿಕೊಂಡಿದೆ. ಬಹಳಷ್ಟು ಜನರಿಗೆ ಅಸಮಾಧಾನವಾಗಿದೆ. ಮುಂದೆ ಏನಾಗುತ್ತದೆ ಎಂಬುವುದು ಗೊತ್ತಿಲ್ಲ. ಅದು ಜ್ವಾಲೆಯಾಗುತ್ತದೆಯೋ ಅವರ ಬುಡಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆಯೋ ಕಾದು ನೋಡಬೇಕಿದೆ. ಬೆಂಕಿ ಅಂತೂ ಹತ್ತಿಕೊಂಡಿದೆ ಎಂದರು.
Advertisement