ಡಿ.5ರಿಂದ ಚಳಿಗಾಲ ಅಧಿವೇಶನ: ಬಂದೋಬಸ್ತ್‌ಗೆ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಡಿಸೆಂಬರ್ 4 ರಿಂದ 15 ರವರೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಡಿಸೆಂಬರ್ 4 ರಿಂದ 15 ರವರೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಅವರು, ವಿಧಾನಮಂಡಲ ಅಧಿವೇಶನಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ಭದ್ರತೆ ಉದ್ದೇಶಕ್ಕಾಗಿ ಒಟ್ಟು 5,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಡಿ.4ರಿಂದ 15ರವರೆಗೆ ಚಳಿಗಾಳ ಅಧಿವೇಶನ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಐಪಿಗಳು ಹಾಗೂ ಪ್ರತಿಭಟನಾಕಾರರಿಗೆ ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 5,000 ಪೊಲೀಸರಲ್ಲಿ 5 ಪೊಲೀಸ್ ವರಿಷ್ಠಾಧಿಕಾರಿಗಳು, 12 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 42 ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 100 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 200 ಪಿಎಸ್‌ಐ, 35 ಕೆಎಸ್‌ಆರ್‌ಪಿ ತುಕಡಿಗಳು, ಗುಪ್ತಚರ ಅಧಿಕಾರಿಗಳು, ಶ್ವಾನ ದಳ ಮತ್ತು 3,000 ಪೊಲೀಸ್ ಪೇದೆಗಳು ಸೇರಿದ್ದಾರೆಂದು ಮಾಹಿತಿ ನೀಡಿದರು.

ಅಧಿವೇಶನಕ್ಕೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಗೆ ವಸತಿ, ಕುಡಿಯುವ ನೀರು, ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸುವರ್ಣ ವಿಧಾನಸೌಧದ ಬಳಿ 1,800 ಪೊಲೀಸ್ ಸಿಬ್ಬಂದಿಗೆ ಅವಕಾಶ ಕಲ್ಪಿಸುವ ಟೌನ್‌ಶಿಪ್ ನಿರ್ಮಿಸಲಾಗುತ್ತಿದೆ. ಅಲ್ಲದೆ, ಮಚ್ಚೆ ಕೆಎಸ್‌ಆರ್‌ಪಿ ಕೇಂದ್ರದಲ್ಲಿ 600, ಕಂಗ್ರಾಳಿ ಕೆಎಸ್‌ಆರ್‌ಪಿ ಕೇಂದ್ರದಲ್ಲಿ 300, ಸಾಂಬ್ರಾ ವಿಮಾನ ನಿಲ್ದಾಣದ ಬಳಿ 150 ಹಾಗೂ ಭೂತರಾಮನಹಟ್ಟಿ, ವೀರಭದ್ರೇಶ್ವರ ದೇವಸ್ಥಾನ, ಶಹಾಪುರ ದೇವಸ್ಥಾನ, ಖಾನಾಪುರ ಪೊಲೀಸ್ ತರಬೇತಿ ಕೇಂದ್ರದಲ್ಲಿ 600 ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ 15 ಸ್ಥಳಗಳಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.

ಚಳಿಗಾಲದ ಅಧಿವೇಶನಕ್ಕೆ ವಿರೋಧಿಸಿ ‘ಮಹಾ ಮೇಳವಾ’ ಪ್ರತಿಭಟನೆ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಯಿಂದ ಇದುವರೆಗೆ ಯಾವುದೇ ಮನವಿ ಪತ್ರಗಳೂ ಬಂದಿಲ್ಲ. ಮನವಿ ಪತ್ರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com