ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆ ವಾಪಸ್: ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸ್ ಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರ ಸರ್ಕಾರದ ಕ್ರಮವನ್ನ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರದ ನಡೆಯನ್ನು ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ವಿಚಾರಣೆಯನ್ನು ನಿಷ್ಪಲಗೊಳಿಸಲು ಯತ್ನಿಸಲಾಗುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ.
ಈ ಹಂತದಲ್ಲಿ ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ. ಸಿಬಿಐ ತನಿಖೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದ್ದು, ಈ ಮೂಲಕ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪದ ಯತ್ನ ನಡೆದಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ಸೀಮಿತವಾಗಿ ತಮ್ಮ ವಾದ ಆಲಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ಆದಾಯಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ದ ತನಿಖೆಗೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯಲು ನಿರ್ಧರಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪ್ರಸ್ತುತ ಕರ್ನಾಟಕ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ತನಿಖೆಗೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆಯಲು ನಿರ್ಧರಿಸಿದೆ ನ.23ರಂದು ರಾಜ್ಯ ಸಚಿವ ಸಂಪುಟದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.
ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಅಂದಿನ ಬಿಜೆಪಿ ಸರ್ಕಾರ ಸ್ಪೀಕರ್‌ನಿಂದ ಒಪ್ಪಿಗೆ ಪಡೆಯುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದಿದ್ದಾರೆ. ಆದರೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಟೀಕೆಗೆ ತಿರುಗೇಟು ನೀಡಿದ್ದು, ಆ ಸಮಯದಲ್ಲಿ ಅವರ ಒಪ್ಪಿಗೆ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ