ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ರೂ.ಮೀಸಲು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕಸ ವಿಲೇವಾರಿ, ಸ್ವಚ್ಛತೆ ಮತ್ತು ನೈರ್ಮಲ್ಯ ರಕ್ಷಣೆಗೆ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕಸ ವಿಲೇವಾರಿ, ಸ್ವಚ್ಛತೆ ಮತ್ತು ನೈರ್ಮಲ್ಯ ರಕ್ಷಣೆಗೆ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನಡೆದ 17ನೇ ಅಂತಾರಾಷ್ಟ್ರೀಯ ಮುನ್ಸಿ ಪಾಲಿಕ-23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ಹಣ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕದ ಒಟ್ಟಾರೆ ಜನಸಂಖ್ಯೆಯ 7 ಕೋಟಿ ಆದರೆ ಶೇ.40ರಷ್ಟು ಅಂದರೆ 3.25 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಮುಟ್ಟಿದೆ. ಏಕೆ ಜನರು ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ ಎನ್ನುವ ಕುರಿತು ನಾವೆಲ್ಲಾ ಯೋಚನೆ ಮಾಡಬೇಕಿದೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ನಗರದ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಬೆಂಗಳೂರು ಹೃದಯ. ಪ್ರತಿ ಜಿಲ್ಲೆಯ, ತಾಲೂಕಿನ ನಗರಗಳು ಹೃದಯಗಳಂತೆ ತಿಳಿದು ಅವುಗಳನ್ನು ಕಾಪಾಡಬೇಕು ಎಂದು ಸೂಚನೆ ನೀಡಿದರು.

ಕೆಲವರು ಒಂದು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಅನುಮತಿ ಪಡೆದಿದ್ದಾರೆ, ಆದರೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸುತ್ತಾರೆ. ಅಂತಹ ಕಟ್ಟಡಗಳನ್ನು ಅಧಿಕಾರಿಗಳು ಗುರುತಿಸಬೇಕು. ಅವರು ರಾಜಕೀಯ ಒತ್ತಡಗಳಿಗೆ ಮಣಿಯಬಾರದು ಮತ್ತು ಆಸ್ತಿ ಮೌಲ್ಯಗಳನ್ನು ಸರಿಯಾಗಿ ಗುರುತಿಸಬೇಕು ಮತ್ತು ತೆರಿಗೆಗಳನ್ನು ಸಂಗ್ರಹಿಸಬೇಕು ಎಂದು ಶಿವಕುಮಾರ್ ಕರೆ ನೀಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈಗ ಶೇ.38 ರಷ್ಟು ಜನರು ನಗರಸಭೆ ಮತ್ತು ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಸರ್ಕಾರ ನೀರು ಸರಬರಾಜು, ಒಳಚರಂಡಿ ಜಾಲ, ವಿದ್ಯುತ್ ಮತ್ತು ಸಾರಿಗೆಯನ್ನು ಒದಗಿಸಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com