ಬರ ನಷ್ಟ ನಿರ್ಣಯಿಸಲು ಮುಂದಿನ ವಾರ ಕರ್ನಾಟಕಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ!
ರಾಜ್ಯದಲ್ಲಿ ಮಳೆ ಕೊರೆತೆಯಿಂದಾಗಿರುವ ನಷ್ಟದ ಅಂದಾಜು ಮಾಡಲು ಕೇಂದ್ರ ಅಧ್ಯಯನ ತಂಡ ಮುಂದಿನ ವಾರ ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
Published: 03rd October 2023 09:21 PM | Last Updated: 03rd October 2023 09:21 PM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ರಾಜ್ಯದಲ್ಲಿ ಮಳೆ ಕೊರೆತೆಯಿಂದಾಗಿರುವ ನಷ್ಟದ ಅಂದಾಜು ಮಾಡಲು ಕೇಂದ್ರ ಅಧ್ಯಯನ ತಂಡ ಮುಂದಿನ ವಾರ ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವರು, ಮೂರು ಉಪತಂಡಗಳನ್ನು ಒಳಗೊಂಡ ಕೇಂದ್ರ ಅಧ್ಯಯನ ತಂಡವು ರಾಜ್ಯದಲ್ಲಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆಲದ ಪರಿಸ್ಥಿತಿಯನ್ನು ನಿರ್ಣಯಿಸಿ ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.
ರಾಜ್ಯದ ವಿವಿಧೆಡೆ ಸಕಾಲಕ್ಕೆ ಮಳೆಯಾಗದೆ ಬರಗಾಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲಾ 195 ತಾಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅವುಗಳಲ್ಲಿ 164 ತಾಲೂಕುಗಳು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ. ಬರಗಾಲದಿಂದಾಗಿ ಸುಮಾರು 40 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿದ್ದು, ಅಂದಾಜು ಮೊತ್ತ 22,000 ಕೋಟಿ ರುಪಾಯಿ ನಷ್ಟವಾಗಿದೆ. ಬರದಿಂದಾಗಿ ರಾಜ್ಯವು 58 ಲಕ್ಷ ಟನ್ ಕೃಷಿ ಉತ್ಪನ್ನಗಳ ಕೊರತೆಯನ್ನು ಎದುರಿಸಬಹುದು ಎಂದು ಚಲುವರಾಯಸ್ವಾಮಿ ಹೇಳಿದರು.
ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಪರಿಹಾರವನ್ನು ಬಿಡುಗಡೆ ಮಾಡುವುದರ ಹೊರತಾಗಿ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ದಿನಗಳನ್ನು ಪ್ರಸ್ತುತ 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸಚಿವರು ಹೇಳಿದರು. ಕೇಂದ್ರ ತಂಡ ಕರ್ನಾಟಕಕ್ಕೆ ಭೇಟಿ ನೀಡಿದ ನಂತರ ಕೇಂದ್ರ ಸರ್ಕಾರ ಕೆಲಸ ದಿನಗಳನ್ನು ಹೆಚ್ಚಿಸಬಹುದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಬರ ಘೋಷಣೆ ವಿಳಂಬಕ್ಕೆ ಕೇಂದ್ರದ ಮಾರ್ಗಸೂಚಿಯೇ ಸಮಸ್ಯೆ: ಸಿಎಂ ಸಿದ್ದರಾಮಯ್ಯ
2013ರಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಆರಂಭಿಸಿದ್ದ ಕೃಷಿ ಹೊಂಡ ಕಾರ್ಯಕ್ರಮ 2018ರವರೆಗೆ ಚಾಲ್ತಿಯಲ್ಲಿತ್ತು. ನಂತರ ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತ್ತು. ಇದೀಗ ಅದನ್ನು ಪುನರಾರಂಭಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ 200 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ ಎಂದರು.
ಕೊಳೆ ರೋಗದಿಂದ ಅಲ್ಪಾವಧಿ ಬೆಳೆ ನಷ್ಟವಾಗಿರುವ ಕುರಿತು ಮಾತನಾಡಿದ ಕೃಷಿ ಸಚಿವರು, ಹಿಂದಿನ ಬಿಜೆಪಿ ಸರ್ಕಾರ ಪರಿಹಾರ ನೀಡುವುದಾಗಿ ಘೋಷಿಸಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ 2017-18ನೇ ಸಾಲಿನಲ್ಲಿ ಕೊಳೆ ರೋಗಕ್ಕೆ ತುತ್ತಾದ ಬೆಳೆಗೆ ಪರಿಹಾರ ನೀಡಲು 223 ಕೋಟಿ ರೂ.ಗಳ ಪರಿಹಾರವನ್ನು ಜಮಾ ಮಾಡಿದೆ. ಇದುವರೆಗೆ ರೈತರ ಖಾತೆಗೆ 148 ಕೋಟಿ ರೂಪಾಯಿ ಹಾಕಲಾಗಿದ್ದು ಉಳಿದ ಮೊತ್ತವನ್ನು ಶೀಘ್ರದಲ್ಲೇ ಜಮಾ ಮಾಡಲಾಗುವುದು ಎಂದರು. ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಗೆ ಸರ್ಕಾರ 3 ಕೋಟಿ ಅನುದಾನ ನೀಡಲಿದ್ದು ಕೆಕೆಆರ್‌ಡಿಬಿ ಕೂಡ ಅದೇ ಮೊತ್ತವನ್ನು ದ್ವಿದಳ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದರು.