ಕ್ಷೇತ್ರಕ್ಕೆ ಅನುದಾನ ಕಡಿತ: ಮುನಿರತ್ನ ಏಕಾಂಗಿ ಹೋರಾಟ, ಯಡಿಯೂರಪ್ಪ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಟ್ಟ ಶಾಸಕ

ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಇಂದು ಬುಧವಾರ ರಾಜಕೀಯ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಪ್ರತಿಭಟನೆ ಕೈಗೊಂಡರು.
ವಿಧಾನ ಸೌಧ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದ ಶಾಸಕ ಮುನಿರತ್ನ ಮನವೊಲಿಸಿದ ಬಿ ಎಸ್ ಯಡಿಯೂರಪ್ಪ
ವಿಧಾನ ಸೌಧ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದ ಶಾಸಕ ಮುನಿರತ್ನ ಮನವೊಲಿಸಿದ ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಇಂದು ಬುಧವಾರ ರಾಜಕೀಯ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಪ್ರತಿಭಟನೆ ಕೈಗೊಂಡರು.

ಮುನಿರತ್ನ ಜೊತೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲ ಪ್ರತಿಭಟನಾನಿರತ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ ಇದರಿಂದ ಧೃತಿಗೆಡದ ಮುನಿರತ್ನ ಅವರು ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನೀಡಬೇಕಿದ್ದ ಅನುದಾನ ಕಡಿತಗೊಳಿಸಿ, ಯಶವಂತಪುರ, ಬ್ಯಾಟರಾಯನಪುರ ಸೇರಿ ಬೇರೆ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪ ಮನವೊಲಿಕೆ: ಮುನಿರತ್ನ ಅವರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆಗಮಿಸಿ ಅವರ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಟ್ಟರು. 

ಮುನಿರತ್ನ ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯ ಶಾಸಕರು ತಮ್ಮ ಉಪವಾಸ ಧರಣಿಯನ್ನು ಹಿಂಪಡೆದು ಸರ್ಕಾರದಿಂದ ನನಗೆ ಸೂಕ್ತ ಉತ್ತರ ಸಿಗಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಅರಮನೆ ಮೈದಾನಕ್ಕೆ ತೆರಳಿದರು.

ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟ ಅನುದಾನ ರದ್ದುಪಡಿಸಿ ಸೇಡಿನ ರಾಜಕೀಯ ಮಾಡಿದ್ದಾರೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ಸಿಎಂ ಜೊತೆ ಮಾತನಾಡಿ ಇದನ್ನು ಸರಿ ಮಾಡುತ್ತೇನೆ. ಇದು ಮೇಲ್ನೋಟಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಅನುದಾನ ಇವರಿಗೂ ಕೊಡಬೇಕು ನಾನು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. 

ಬಿಎಸ್‌ವೈ ಭರವಸೆ ಹಿನ್ನೆಲೆ ಮುನಿರತ್ನ ಅವರು ಧರಣಿ ಕೈಬಿಟ್ಟಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿರತ್ನ, ಫಲಿತಾಂಶ ಬಂದಾಗಿನಿಂದ ನನ್ನ ಕ್ಷೇತ್ರದಲ್ಲಿ ಒಬ್ಬ ಶಾಸಕನಾಗಿ ಕೆಲಸ ಮಾಡೋದು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಅಧಿಕಾರಿಗಳ ಅಮಾನತು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

126 ಕೋಟಿ ರೂ. ಅನುದಾನ ವಾಪಸ್ ಖಂಡಿಸಿ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಉಪವಾಸ ಧರಣಿ ನಡೆಸಿದ್ದರು. ಈ ಹಿನ್ನೆಲೆ ಮುನಿರತ್ನ ಅವರ ಪ್ರತಿಭಟನೆಗೆ ಅಡ್ಡಿಪಡಿಸಲು ಪೊಲೀಸರು ಯೋಜನೆ ರೂಪಿಸಿದ್ದು, ಹೆಚ್ಚುವರಿ ಪ್ರತಿಭಟನಾಕಾರರಿಗೆ ನಿರ್ಬಂಧ ಹಾಕಿದ್ದಾರೆ ಎಂದು ದೂರಿದರು. 

ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವಿರುದ್ಧ ಬಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿಲ್ಲಿಸುವಂತೆ ಮುನಿರತ್ನ ಅವರ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಇದು ಶಾಂತಿಯುತ ಹಾಗೂ ಯಾರಿಗೂ ತೊಂದರೆ ಮಾಡದ ಪ್ರತಿಭಟನೆ. ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. 

ಈ ಸಂದರ್ಭ ಪೊಲೀಸರು ಮುನಿರತ್ನ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಬಲವಂತವಾಗಿ ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅನ್ಯಾಯ, ಧಿಕ್ಕಾರ ಎಂದು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕರಿಗೆ ಪ್ರತಿಭಟನೆಗೆ ಅವಕಾಶ ಇದೆ. ಬೇರೆಯವರಿಗೆ ಇಲ್ಲ ಎಂದ ಪೊಲೀಸರು ಶಾಸಕರನ್ನು ಬಿಟ್ಟು ಉಳಿದವರನ್ನು ವಶಕ್ಕೆ ಪಡೆದರು. ನಂತರ ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com