ಬರದಿಂದ ಉತ್ಪಾದನೆ ಕುಂಠಿತ, ಬೇಡಿಕೆ ಹೆಚ್ಚಳ; ಅದರಿಂದ ವಿದ್ಯುತ್ ಕೊರತೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಈ ವರ್ಷ ಮುಂಗಾರ ವೈಫಲ್ಯದಿಂದ ಬರಗಾಲ ಉಂಟಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾದ ಕಾರಣ ವಿದ್ಯುತ್ ಕೊರತೆ ಉಂಟಾಗುತ್ತಿದೆ ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ರಾಜ್ಯದ ಒಳಗೆ ಮತ್ತು ಹೊರಗಿನಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರ ವೈಫಲ್ಯದಿಂದ ಬರಗಾಲ ಉಂಟಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾದ ಕಾರಣ ವಿದ್ಯುತ್ ಕೊರತೆ ಉಂಟಾಗುತ್ತಿದೆ ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈಗಿನ ಪರಿಸ್ಥಿತಿಯನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರಾಜ್ಯದ ಒಳಗೆ ಮತ್ತು ಹೊರಗಿನಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವವರು ಸರಕಾರಕ್ಕೆ ಪೂರೈಕೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದರು. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ, ಆದರೆ ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಕಾಲದಲ್ಲಿ ಆಗುವಂತೆ ಈಗ ಮಳೆಗಾಲದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿ ಕೊರತೆಯುಂಟಾಗಿದೆ. ಆದರೆ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,000 ರಿಂದ 10,000 ಮೆಗಾವ್ಯಾಟ್‌ಗೆ ಹೋಲಿಸಿದರೆ ಈಗ ಬಳಕೆಯ ಬೇಡಿಕೆ 15,000-16,000 ಮೆಗಾವ್ಯಾಟ್ ಆಗಿದೆ, ಆದ್ದರಿಂದ ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು. 

ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ಇದರಿಂದ ವಿದ್ಯುತ್‌ ಅಭಾವ ಸೃಷ್ಟಿಯಾಗಿದೆ. ಜತೆಗೆ ಈಗಲೇ ಬೇಸಿಗೆ ಕಾಲದಲ್ಲಿ ಬರುವ ರೀತಿಯಲ್ಲಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಮತ್ತಷ್ಟು ಅಭಾವ ಆಗಿದೆ. ಹೀಗಾಗಿ ವಿದ್ಯುತ್‌ ಸರಬರಾಜಿನ ಬಗ್ಗೆ ಪರ್ಯಾಯ ಮಾರ್ಗಗಳತ್ತ ಸರ್ಕಾರ ದೃಷ್ಟಿ ಹರಿಸಿದೆ. ಬೇರೆ ರಾಜ್ಯಗಳಿಂದ ವಿದ್ಯುತ್‌ ಮಾಡುವ ಬಗ್ಗೆ ಚರ್ಚೆ ನಡೆಸಲು ಇಂದು ಸಭೆ ಕರೆಯಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಈ ಮೂಲಕ ಲೋಡ್‌ ಶೆಡ್ಡಿಂಗ್‌ಗೆ ವಿದ್ಯುತ್‌ ಕೊರತೆಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಹೊರಗಿನಿಂದ ವಿದ್ಯುತ್ ಖರೀದಿಸುವ ಕುರಿತು ಚರ್ಚಿಸಲು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದೇನೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವವರು ಸರಕಾರಕ್ಕೆ ಪೂರೈಕೆ ಮಾಡಬೇಕು ಎಂದು ಇತ್ತೀಚೆಗೆ ಆದೇಶವನ್ನೂ ಹೊರಡಿಸಿದ್ದೇವೆ. ನಾವು ವಿದ್ಯುತ್ ಖರೀದಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು. 

ಬಿಜೆಪಿಯವರಿಗೆ ವಸ್ತುಸ್ಥಿತಿ ಗೊತ್ತಿಲ್ಲ: ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಹೇಳಿದ್ದಕ್ಕೆಲ್ಲ ಉತ್ತರ ನೀಡಲು ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೆ ತಿಳಿದಿದೆಯೇ? ಮಳೆ ಇಲ್ಲದೆ ಬರಗಾಲ ಬಂದು ತೊಂದರೆಯಾಗಿದೆ. ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್‌ನಲ್ಲಿ 7 ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಏಳು ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಿಎಂ ಅಸಹಾಯಕತೆ ತೋರಿಸಿಕೊಂಡರು. 

ಇಂಧನ ಖರೀದಿಗೆ ಮುಂದಾಗಿದ್ದೇವೆ ಕೆಜೆ ಜಾರ್ಜ್: ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್‌, ವಿದ್ಯುತ್‌ ಕೊರತೆ ನೀಗಿಸಲು ಬೇರೆ ಬೇರೆ ರಾಜ್ಯಗಳ ಜೊತೆ ಮಾತನಾಡುತ್ತಿದ್ದೇವೆ. ನಮಗೆ ತೊಂದರೆ ಆಗಿದೆ. ಇದಕ್ಕೆ ಬಿಜೆಪಿ ಕಾರಣ. ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ವಿದ್ಯುತ್ ನ್ನು ಹೆಚ್ಚಿಸುವ ಯಾವ ಕೆಲಸವನ್ನೂ ಬಿಜೆಪಿ ಸರ್ಕಾರವಿದ್ದಾಗ ಮಾಡಲಿಲ್ಲ. ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನದ ಉತ್ಪಾದನೆಯನ್ನು ಹೆಚ್ಚು ಮಾಡಿದ್ದೆವು. ಆದರೆ, ಬಿಜೆಪಿಯವರು 4 ವರ್ಷ ನಿದ್ದೆ ಮಾಡಿರುವ ಸಲುವಾಗಿ ಇಂದು ನಮಗೆ ವಿದ್ಯುತ್ ಕೊರತೆ ಆಗಿದೆ ಎಂದು ಆರೋಪಿಸಿದರು. 

ವಿದ್ಯುತ್‌ ಕೊರತೆ ನೀಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಬೇರೆ ರಾಜ್ಯದಿಂದ ವಿದ್ಯುತ್‌ ಖರೀದಿ ಮಾಡಿ ನೀಡಲಾಗುವುದು ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com