ಚಲ್ಲಘಟ್ಟ-ವೈಟ್‌ಫೀಲ್ಡ್ ಮಾರ್ಗ ಪೂರ್ಣ; 'ನಮ್ಮ ಮೆಟ್ರೋ' ಪ್ರಯಾಣಕ್ಕೆ ಹೆಚ್ಚಿದ ಆದ್ಯತೆ!

ನಮ್ಮ ಮೆಟ್ರೋ ಈ ಶುಕ್ರವಾರಕ್ಕೆ (ಅಕ್ಟೋಬರ್ 20) ತನ್ನ 13 ನೇ ವರ್ಷಕ್ಕೆ ಕಾಲಿಡಲಿದೆ ಮತ್ತು ಅದರ 73.81-ಕಿಮೀ ಸಂಪರ್ಕ ಜಾಲದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ನಮ್ಮ ಮೆಟ್ರೋ ಈ ಶುಕ್ರವಾರಕ್ಕೆ (ಅಕ್ಟೋಬರ್ 20) ತನ್ನ 13 ನೇ ವರ್ಷಕ್ಕೆ ಕಾಲಿಡಲಿದೆ ಮತ್ತು ಅದರ 73.81-ಕಿಮೀ ಸಂಪರ್ಕ ಜಾಲದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರತಿದಿನ ಸರಾಸರಿ 7 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೀವನದ ಗುಣಮಟ್ಟ ಹೆಚ್ಚಿಸುವಲ್ಲಿ ಅದರ ಕೊಡುಗೆ ಏನು? ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ಸಮಸ್ಯೆ ಸರಾಗಗೊಳಿಸುವಲ್ಲಿ ಮತ್ತು ಬೆಂಗಳೂರಿಗರ ಪ್ರಯಾಣದಲ್ಲಿ ಇದು ಏನಾದರೂ ಬದಲಾವಣೆ ಮಾಡಿದೆಯೇ? ಭವಿಷ್ಯದಲ್ಲಿ ಮೆಟ್ರೋ ನೆಟ್‌ವರ್ಕ್ ನಾಲ್ಕು ಪಟ್ಟು ವಿಸ್ತರಣೆಯಾಗಲಿದ್ದು, ಮುಂದೆ ಏನಾಗಲಿದೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. 

ಇತ್ತೀಚಿಗೆ ಉದ್ಘಾಟನೆಯಾದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಾಡುಗೋಡಿವರೆಗಿನ ಸಂಪೂರ್ಣ ನೇರಳೆ ಮಾರ್ಗಕ್ಕೆ ಜನತೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಅಕ್ಟೋಬರ್ 9 ರಂದು 4.15 ಕಿಮೀ ಹೆಚ್ಚುವರಿ ಮಾರ್ಗವನ್ನು ಮುಕ್ತಗೊಳಿಸಿದ ನಂತರ ದೈನಂದಿನ ಸವಾರರ ಸಂಖ್ಯೆಯಲ್ಲಿ ತಕ್ಷಣವೇ 1 ಲಕ್ಷಕ್ಕೂ ಹೆಚ್ಚು ಏರಿಕೆಯಾಗಿದೆ. ಮೆಟ್ರೋಗೆ ಮುಂದಿನ ದೊಡ್ಡ ಮೈಲಿಗಲ್ಲು ಫೆಬ್ರವರಿ 2024 ಕ್ಕೆ ನಿಗದಿಯಾಗಿದೆ. ಆಗ ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ಕಾರ್ಯಾರಂಭಗೊಳ್ಳುತ್ತದೆ. ಜೂನ್ 2025 ರೊಳಗೆ 175 ಕಿ. ಮೀ ಹಾಗೂ 2041 ರೊಳಗೆ 314 ಕಿ. ಮೀ ಉದ್ಧದ ವಿಸ್ತರಿತಾ ಮೆಟ್ರೋ ಮಾರ್ಗ ನಿರ್ಮಾಣದ ಗುರಿ ಹೊಂದಲಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಮೆಟ್ರೋ ಉನ್ನತ ಮೆಟ್ರೋ ಅಧಿಕಾರಿಗಳು, ತಜ್ಞರು, ಸಾರ್ವಜನಿಕ ಸಾರಿಗೆ ಪ್ರತಿಪಾದಿಸುವ ಪ್ರಮುಖರೊಂದಿಗೆ ಸಂವಾದ ನಡೆಸಿತು. ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಿಸಿದ ಕೇವಲ ನಾಲ್ಕು ದಿನಗಳಲ್ಲಿ ಬೈಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ, ಟಿನ್ ಫ್ಯಾಕ್ಟರಿ ಮತ್ತು ಲೋರಿ ಜಂಕ್ಷನ್ ಗಳಲ್ಲಿ ಶೇ.15ರಿಂದ ಶೇ.20ರಷ್ಟು ಸಂಚಾರ ಕಡಿತವಾಗಿದೆ. ಹೊರ ವರ್ತುಲ ರಸ್ತೆ ಮಾರ್ಗ ಕಾರ್ಯಾರಂಭಗೊಂಡರೆ ಸಿಲ್ಕ್ ಬೋರ್ಡ್ ಜಂಕ್ಷನ್‌ಗೂ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ಕೆಆರ್ ಪುರ ಜಂಕ್ಷನ್ ನಲ್ಲಿ ಜನದಟ್ಟಣೆ ಮಾಯವಾಗಿದೆ ಎಂದು ವೈಟ್ ಫೀಲ್ಡ್ ನ ಪೊಲೀಸ್ ಮೂಲಗಳು ತಿಳಿಸಿವೆ. 

"ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಫೀಡರ್ ಬಸ್‌ಗಳು, ಟೆಕ್ಕಿಗಳನ್ನು ತಮ್ಮ ಕಚೇರಿಗಳಿಗೆ ಕರೆದೊಯ್ಯುವುದರಿಂದ ಹೊರ ವರ್ತುಲ ರಸ್ತೆಯಲ್ಲಿ ದೊಡ್ಡ ಪರಿಹಾರ ಸಿಕ್ಕಿದೆ. ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ಕಾರ್ಯಾರಂಭಗೊಂಡಾಗ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ತಲುಪಲಿದೆ ಎಂದು ಅವರು ಹೇಳಿದರು.

  
  

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್ ಮಾತನಾಡಿ, “ನಮ್ಮ ಹೊಸ  ಮಾರ್ಗ ವಿಸ್ತರಣೆಯೊಂದಿಗೆ ಬೆಂಗಳೂರಿನ ಮೂಲೆ ಮೂಲೆಯಿಂದಲೂ ಜನರು ಸುಲಭವಾಗಿ ಸಂಚರಿಸುವಂತಾಗಿದೆ.  ವೈಟ್‌ಫೀಲ್ಡ್‌ನಿಂದ ದಕ್ಷಿಣ ಬೆಂಗಳೂರಿಗೆ ಮತ್ತು ದಕ್ಷಿಣದಿಂದ ಪೂರ್ವಕ್ಕೆ ಜನರು ಪ್ರಯಾಣಿಸುತ್ತಿದ್ದಾರೆಂದು ನಾನು ಕೇಳಿದ್ದೇನೆ. ಮೆಟ್ರೋ ಸಾರ್ವಜನಿಕ ಸಾರಿಗೆಯನ್ನು ಕ್ರಾಂತಿಗೊಳಿಸಿದೆ. ಪ್ರಯಾಣಿಕರು ಏಕಕಾಲದಲ್ಲಿ ಎರಡು ಸಾರಿಗೆ ಬಳಸುತ್ತಿದ್ದಾರೆ. ನಾವು ಟ್ರಂಕ್ ಸೇವೆ ಬಿಎಂಟಿಸಿ ಫೀಡರ್ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು. 

ನಗರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾಕಷ್ಟು ಧ್ವನಿಯೆತ್ತಿರುವ ಆರಿನ್ ಕ್ಯಾಪಿಟಲ್ ಪಾರ್ಟ್‌ನರ್ಸ್‌ನ ಅಧ್ಯಕ್ಷ ಟಿವಿ ಮೋಹನ್‌ದಾಸ್ ಪೈ ಮಾತನಾಡಿ, ಬೆಂಗಳೂರು ಮೆಟ್ರೋ ಕನಿಷ್ಠ 250 ಕಿ.ಮೀ ವರೆಗೆ ವಿಸ್ತರಿಸಿದಾಗ ಮಾತ್ರ ನಿಜವಾದ ಗೇಮ್ ಚೇಂಜರ್ ಆಗಲಿದೆ ಎಂದರು. "ದೆಹಲಿ ಮೆಟ್ರೋ ಈಗ 393 ಕಿಮೀ ಕ್ರಮಿಸುತ್ತದೆ ಮತ್ತು 68 ಲಕ್ಷ ಪ್ರಯಾಣಿಕರನ್ನು ಹೊಂದಿದೆ. ಬೆಂಗಳೂರು ಮೆಟ್ರೋ ತನ್ನ 73 ಕಿಮೀ ನೆಟ್‌ವರ್ಕ್‌ಗೆ ಈಗ ಸರಾಸರಿ 7 ಲಕ್ಷ ಪ್ರಯಾಣಿಕರನ್ನು ಹೊಂದಿದೆ. ಇದು 250 ಕಿಮೀ ಕ್ರಮಿಸಿದಾಗ ಅದರ ಸವಾರರು 35 ಲಕ್ಷವನ್ನು ಮುಟ್ಟಬಹುದು. ಆಗ ಅದು ಪ್ರಯಾಣದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಹೇಳಿದರು. 

ನಗರ ಸಾರಿಗೆ ತಜ್ಞ ಸಂಜೀವ್ ವಿ ದ್ಯಾಮಣ್ಣನವರ್ ಮಾತನಾಡಿ, ಬೆಂಗಳೂರಿನ ಜನರು ದುಬಾರಿಯಾದರೂ ಉತ್ತಮ, ಸುಸಂಘಟಿತ ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳಲು ಇಚ್ಛೆಯನ್ನು ತೋರಿಸಿದ್ದಾರೆ. ಡಿಪಿಆರ್ ಅಂದಾಜಿನ ಪ್ರಕಾರ, ಸಾಕಷ್ಟು ಮೆಟ್ರೋ ಕಾರುಗಳೊಂದಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆ 13 ಲಕ್ಷ ಮತ್ತು ನಂತರ 18 ಲಕ್ಷ ತಲುಪಬೇಕು. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಗರಕ್ಕೆ ಪಾರ್ಕಿಂಗ್ ನೀತಿ ಮತ್ತು ಜಾಹೀರಾತು ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದರು. ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಕ್ರಮ್ ರೈ ಮಾತನಾಡಿ, “ಮೆಟ್ರೋ ನಗರದ ಬೆನ್ನೆಲುಬಾಗಿ ಹೊರಹೊಮ್ಮಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಉಪನಗರ ರೈಲು ಯೋಜನೆ: ಬೆಂಗಳೂರು ಉಪನಗರ ರೈಲು ಯೋಜನೆ ಒಂದು ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದ್ದು ಅದು ಪೂರ್ಣಗೊಂಡಾಗ ನಾಗರಿಕರ ಪ್ರಯಾಣದ ಮಾರ್ಗವನ್ನು ಬದಲಾಯಿಸಬಹುದು. 15,767 ಕೋಟಿ ರೂ.ಗಳ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೆ- ರೈಡ್ ಏಜೆನ್ಸಿಯ ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

147.17-ಕಿಮೀ ಯೋಜನೆಯು ಸಂಪೂರ್ಣವಾಗಿ ಸಿದ್ಧವಾದಾಗ, ನಗರದಲ್ಲಿ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ತನ್ನ ನಾಲ್ಕು ಕಾರಿಡಾರ್ ಜಾಲದಲ್ಲಿ ಕನಿಷ್ಠ 10 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ. ಆ ವೇಳೆಗೆ ಮೆಟ್ರೋ ಹೊತ್ತೊಯ್ಯಲಿದ್ದ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಜೊತೆಗೆ, ಎರಡು ಸಾರಿಗೆ ವ್ಯವಸ್ಥೆಗಳು ಸರಿಸುಮಾರು 20 ಲಕ್ಷ ಜನರನ್ನು ರಸ್ತೆಗಳಿಂದ ದೂರವಿಡಲಿವೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com