ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ: ನಾಳೆ ವಿಶ್ವ ಪ್ರಸಿದ್ಧ ಜಂಬೂಸವಾರಿ; ದಸರಾ ಮೆರವಣಿಗೆಗೆ ಅಂತಿಮ ಹಂತದ ತಯಾರಿ

ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಿಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ.
ಜಂಬೂಸವಾರಿ (ಸಂಗ್ರಹ ಚಿತ್ರ)
ಜಂಬೂಸವಾರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು:  ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಬೆಳಿಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ. ಇದೊಂದು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.

ಬೆಳಗ್ಗೆ 9.30ಕ್ಕೆ ಚಂಡಿಹೋಮಪೂರ್ಣಾಹುತಿ ಕಾರ್ಯಕ್ರಮ ಮುಕ್ತಾಯವಾಗಲಿದೆ. ಬೆಳಿಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಪಟ್ಟದ ಹಸು ಆಗಮಿಸಲಿದೆ. ಮಧ್ಯಾಹ್ನ 12.20 ನಿಮಿಷದಿಂದ ಮಧ್ಯಾಹ್ನ 12.45 ನಿಮಿಷದವರೆಗೆ ಆಯುಧ ಪೂಜೆ ನಡೆಯಲಿದೆ.

ಇದನ್ನು 'ಅಸ್ತ್ರ ಪೂಜಾ' ಎಂದೂ ಕರೆಯಲಾಗುತ್ತದೆ. ದಸರಾ ಹಬ್ಬದ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ. ಅಶ್ವಿನಿ ಮಾಸದ ಶುಕ್ಲಪಕ್ಷದ ನವಮಿ ದಿನ ಶಸ್ತ್ರಾಸ್ತ್ರ, ವಾಹನ ಹಾಗೂ ಯಂತ್ರಗಳ ಪೂಜೆ ಮಾಡಿದರೆ ಶುಭವಾಗಲಿದೆ ಎಂದು ನಂಬಲಾಗುತ್ತದೆ. ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ ನೆರವೇರಿಸಲಿದ್ದಾರೆ.

ಯದುವೀರ ಅವರು ಅರಮನೆಯಲ್ಲಿನ ಆಯುಧಗಳಿಗೆ ಪೂಜೆ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಮಧ್ಯೆ, ಮಂಗಳವಾರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು, ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸಲಿದ್ದಾರೆ. ಇದಕ್ಕಾಗಿ ಅರಮನೆ ನಗರಿ ರಂಗೇರುತ್ತಿದೆ. ಸಿಎಂ ಭಾಗಿ ಮೈಸೂರು ದಸರಾ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅ.24) ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುತ್ತಾ ‘ರಾಜಪಥ’ದಲ್ಲಿ ಸಾಗಲು ಕಲಾತಂಡಗಳು, ಸ್ತಬ್ಧಚಿತ್ರಗಳು ಸಜ್ಜಾಗಿವೆ. ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 25 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.

750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗುವ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಗೆ ನಮಿಸಲು, ಗಜಪಡೆಯನ್ನು ನೋಡಲು ಜನರು–ಪ್ರವಾಸಿಗರು ಕಾತರರಾಗಿದ್ದಾರೆ. ಅಂಬಾರಿ ಹೊರಲಿರುವ ‘ಅಭಿಮನ್ಯು’ ನೇತೃತ್ವದಲ್ಲಿ 14 ಆನೆಗಳು ಆಕರ್ಷಕ ವಿದ್ಯುತ್‌ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ.

ಅರಮನೆಯ ಬಲರಾಮ ದ್ವಾರದಲ್ಲಿ ಮಂಗಳವಾರ ಮಧ್ಯಾಹ್ನ1.46ರಿಂದ 2.08ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40ರಿಂದ 5ರವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಮೇಯರ್ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಜಂಬೂಸವಾರಿ ಉದ್ಘಾಟನೆಗೆ ಮುಖ್ಯಅತಿಥಿಯಾಗಿ ಆಹ್ವಾನಿಸುವುದನ್ನು ಈ ವರ್ಷವೂ ಮುಂದುವರಿಸಲಾಗಿದೆ.

ಜೊತೆಗೆ ಇಂದು ಮೈಸೂರಿನಲ್ಲಿ ಏರ್‌ಶೋ ನಡೆಯಲಿದ್ದು, ಸಿಎಂ ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಭಾರತೀಯ ವಾಯುಪಡೆ ವತಿಯಿಂದ ಏರ್ ಶೋ ನಡೆಯುತ್ತಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬನ್ನಿ ಮಂಟಪದಲ್ಲಿ ಯುದ್ಧ ವಿಮಾನಗಳು ಪ್ರದರ್ಶನ ನಡೆಯಲಿದೆ. ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಡ್‌ ಕಾರ್ಡ್‌ ಹಾಗೂ ಟಿಕೆಟ್‌ ಹೊಂದಿರುವವರಿಗೆ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com