
ಕೆ ಎಚ್ ಮುನಿಯಪ್ಪ
ಬೆಂಗಳೂರು: ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಈ ತಾಲೂಕುಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬರಪೀಡಿತ ತಾಲೂಕುಗಳಲ್ಲಿ ಐದು ಕೆಜಿ ಅಕ್ಕಿಗೆ ಹಣ ಬದಲು ಅಕ್ಕಿಯನ್ನೇ ಪೂರೈಕೆ ಮಾಡಲಾಗುತ್ತದೆ. ಬರ ಪೀಡಿತ ತಾಲೂಕುಗಳಲ್ಲಿ ಒಟ್ಟು ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಸಚಿವ ಕೆ ಎಚ್ ಮುನಿಯಪ್ಪ ಅವರು, ಮುಂದಿನ ಒಂದು ವಾರದಲ್ಲಿ ಅಕ್ಕಿ ಖರೀದಿ ಪೈನಲ್ ಆಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ಗಢ ಸರ್ಕಾರ ಅಕ್ಕಿ ನೀಡಲು ಮುಂದೆ ಬಂದಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಹತ್ತು ಕೆಜಿ ಅಕ್ಕಿ ಕೋಡುವ ಕೆಲಸ ಮಾಡುತ್ತೇವೆ ಎಂದರು.
ಇದನ್ನು ಓದಿ: ಬರಪೀಡಿತ ತಾಲ್ಲೂಕ್ ಘೋಷಣೆ, ನಾಳೆ ಸಚಿವ ಸಂಪುಟ ಉಪ ಸಮಿತಿ ಸಭೆ- ಕೃಷ್ಣ ಬೈರೇಗೌಡ
ಇನ್ನು ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ದೇಶದಲ್ಲಿ ಶೇ. 35 ರಿಂದ 37 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಯುಪಿಎ ಇದ್ದಾಗ ಆಹಾರ ಭದ್ರತಾ ಕಾಯ್ದೆ ತರಲಾಗಿತ್ತು. ಯಾರೂ ಕೂಡ ಕೆಲಸ ಇಲ್ಲದೆ ಮಲಗಬಾರದು ಅಂತ ನರೇಗಾ ಯೋಜನೆ ತಂದಿದ್ದೆವು. ಈ ಆಹಾರ ಭದ್ರತಾ ಕಾಯ್ದೆಯಿಂದ ಜನರಿಗೆ ಅನುಕೂಲ ಆಗುತ್ತಿದೆ ಎಂದರು.