ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ? ರಾಜ್ಯ ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ಆಕ್ರೋಶ
ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 09th September 2023 06:14 PM | Last Updated: 09th September 2023 07:08 PM | A+A A-

ಬಸವರಾಜ ಬೊಮ್ಮಾಯಿ
ಹಾವೇರಿ: ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಳಿ ನಡೆದಿದ್ದ ಪಟಾಕಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಹೇಳಿ, ಇಲ್ಲಿಯವರೆಗೂ ಬರಗಾಲ ಘೋಷಣೆ ಮಾಡಿಲ್ಲ. ನಾವು ಕೂಡಾ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಅಂತಾ ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ. ಈ ಸಬೂಬು ಹೇಳಿ ಬರಗಾಲ ಘೋಷಣೆ ಮಾಡುತ್ತಿಲ್ಲ. ಮಳೆಗಾಲ ಮುಗಿಯುತ್ತಾ ಬಂತು ಈಗೇನು ಘೋಷಣೆ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದೆ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಿಂದ ತೊಂದರೆಯಾಗಿದೆ. ಹಣಕಾಸಿನ ನೇರವು ನೀಡಿ ವಿದ್ಯುತ್ ಖರೀದಿ ಮಾಡಬೇಕು, ಬರಗಾಲ ಘೋಷಣೆ ಮಾಡದೆ ಸುಮ್ಮನೆ ಮುಂದಕ್ಕೆ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಇರುವ ಹಣ ಬಳಕೆ ಮಾಡುತ್ತಿಲ್ಲ. ಬರ ಘೋಷಣೆಗೂ ಮೂಹರ್ತ ನೋಡುತ್ತಿದ್ದೀರಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಇನ್ನೂ ಯಾವಾಗ ಬರಗಾಲ ಘೋಷಣೆ ಮಾಡುವುದು? ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು: ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಅಧಿವೇಶನದಲ್ಲಿ ಹೇಳಿದರೂ ಕೃಷಿ ಸಚಿವರು ಅಲ್ಲಗಳೆದಿದ್ದರು. ಮಾದ್ಯಮಗಳಲ್ಲಿ ರೈತರ ಆತ್ಮಹತ್ಯೆಗಳ ಸುದ್ದಿ ಬಂದ ನಂತರ ಒಪ್ಪಿಗೆ ಕೊಡಲು ಆರಂಭಿಸಿದ್ದಾರೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಎಫ್ ಎಸ್ ಎಲ್ ರಿಪೋರ್ಟ್ ಬರುವುದು ವಿಳಂಬವಾಗುತ್ತದೆ. ಕನಿಷ್ಠ 15-20 ದಿನ ಸಮಯ ಬೇಕಾಗುತ್ತದೆ. ರೈತರು ವಿವಿಧ ರೂಪದಲ್ಲಿ ಸಾಲ ಮಾಡಿರುತ್ತಾರೆ. ಮೃತರ ಕುಟುಂಬಗಳಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರ: ಇತ್ತೀಚೆಗೆ ನಡೆದ ಪಟಾಕಿ ದುರಂತದಲ್ಲಿ ನಾಲ್ವರು ಸಾವನ್ನಪ್ಪಿರುವುದು ದುರ್ದೈವದ ಸಂಗತಿ. ಇಷ್ಟೊಂದು ದೊಡ್ಡ ಪ್ರಮಾಣದ ಪಟಾಕಿ ಸಂಗ್ರಹ ಮಾಡಿದ್ದು ತಪ್ಪು. ಮುಂಜಾಗ್ರತಾ ಮಾರ್ಗಗಳನ್ನು ಇಟ್ಟಿರಬೇಕು, ಜಿಲ್ಲಾಧಿಕಾರಿಗಳು ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಬೇಕು. ಕಠಿಣ ಕ್ರಮ ತೆಗೆದುಕೊಳ್ಳದೆ ಹೋದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಇಂತಹ ಘಟನೆಗಳಲ್ಲಿ ಗಾಯಕ್ಕಿಂತ ಸಾವುಗಳೆ ಹೆಚ್ಚಾಗುತ್ತವೆ. ಈ ದುರಂತ ನಡೆದಾಗ ಮೃತರ ಕುಟುಂಬಗಳಿಗೆ ತಲಾ ಒಂದೊಂದು ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವು, ಅದರಂತೆ ಇಂದು ಪಕ್ಷದಿಂದ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.