ಸಂಚಾರ ದಟ್ಟಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ತಗ್ಗಿಸಲು ಶಾಲೆ, ಕೈಗಾರಿಕೆಗಳ ಸಮಯ ಬದಲಾವಣೆಗೆ ಸರ್ಕಾರಕ್ಕೆ ಹೈಕೋರ್ಟ್ ಸಲಹೆ!
ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸಲು ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
Published: 13th September 2023 01:39 PM | Last Updated: 13th September 2023 01:52 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ತಪ್ಪಿಸಲು ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಈ ಸಂಬಂಧ ಶಾಲೆಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಪಾಲುದಾರರ ಸಭೆ ಕರೆದು ಚರ್ಚೆ ನಡೆಸುವಂತೆ ನ್ಯಾಯಾಲಯ ತಾಕೀತು ಮಾಡಿದೆ.
ಬಳ್ಳಾರಿ ರಸ್ತೆ ವಿಸ್ತರಣೆ ಸಂಬಂಧ ಸರ್ಕಾರೇತರ ಸಂಸ್ಥೆ ಸಮರ್ಪಣಾ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಇದನ್ನೂ ಓದಿ: ಖಾಸಗಿಯಾಗಿ ಪೋರ್ನ್ ನೋಡುವುದು ಅಪರಾಧವಲ್ಲ: ಹೈಕೋರ್ಟ್
ಕೆಲಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ ‘ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಶಾಲಾ ಬಸ್ ಆಪರೇಟರ್‌ಗಳು, ಪೋಷಕರ ಸಂಘಗಳು ಸೇರಿ ಸಂಬಂಧಿಸಿದ ಎಲ್ಲರ ಸಭೆ ಕರೆಯಬೇಕು. ವಾಹನ ದಟ್ಟಣೆ ತಗ್ಗಿಸಲು ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬಹುದು. ಈ ವೇಳೆ ಶಾಲಾ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ನಿರ್ದೇಶನ ನೀಡಿದೆ.
ಅಂತೆಯೇ, ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೂಲಕ ಎಲ್ಲ ಕೈಗಾರಿಕೆಗಳ ಒಕ್ಕೂಟಗಳು, ಕಾರ್ಮಿಕ ಸಂಘಟನೆಗಳು, ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಸ್ಥೆಗಳ ಒಕ್ಕೂಟ, ಕಂಪನಿಗಳ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿ ಕೆಲಸದ ಅವಧಿಯನ್ನು ಬದಲಾವಣೆ ಮಾಡಬಹುದು ಎಂದು ನ್ಯಾಯಪೀಠ ಸೂಚಿಸಿತು.
ದುಡಿಯುವ ಸಮಯವನ್ನು ಸರಳಗೊಳಿಸುವುದು, ಜನದಟ್ಟಣೆ ಸಮಯದಲ್ಲಿ ವಾಹನ ದಟ್ಟಣೆ ತಗ್ಗಿಸುವ ಸಂಬಂಧ ಸಂಬಂಧಿಸಿದ ಎಲ್ಲರಿಂದಲೂ ಸಲಹೆ-ಸೂಚನೆಗಳನ್ನು ಪಡೆದು ಸರ್ಕಾರ ಮುಂದುವರಿಯಬಹುದು ಎಂದು ನ್ಯಾಯಾಲಯ ಹೇಳಿತು.