
ಬೆಂಗಳೂರು: ಅಲ್ಪಸಂಖ್ಯಾತರಿಗೆ ವಾಣಿಜ್ಯ ವಾಹನ ಖರೀದಿಗೆ ಸಬ್ಸಿಡಿ ನೀಡುವ ರಾಜ್ಯ ಸರ್ಕಾರದ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಹಿಂದಿ ಸುದ್ದಿ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 ಮತ್ತು 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜನ) ಅಡಿಯಲ್ಲಿ ಚಾನಲ್ ಮತ್ತು ಅದರ ಕನ್ಸಲ್ಟಿಂಗ್ ಎಡಿಟರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರದಾನ ಸಂಪಾದಕ ಸುಧೀರ್ ಚೌಧರಿ ಅವರು ಈ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಡಲು ಯತ್ನಿಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಎಫ್‌ಐಆರ್‌ಗೆ ಪ್ರತಿಕ್ರಿಯಿಸಿದ ಆಜ್ ತಕ್ ಚಾನಲ್‌ನ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ, ಈ ಸಂಬಂಧ ತಾವು ನ್ಯಾಯಾಲಯದಲ್ಲಿ ಹೋರಾಡಲು ಸಿದ್ಧ ಎಂದು ಹೇಳಿದ್ದಾರೆ.
'ಕರ್ನಾಟಕದ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನನ್ನ ಪ್ರಶ್ನೆಗೆ ಉತ್ತರ ಎಫ್‌ಐಆರ್? ಅದೂ ಜಾಮೀನು ರಹಿತ ಸೆಕ್ಷನ್‌ಗಳೊಂದಿಗೆ. ಅಂದರೆ ಬಂಧನಕ್ಕೆ ಸಂಪೂರ್ಣ ಸಿದ್ಧತೆಯಾಗಿದೆ ಎಂದರ್ಥವಲ್ಲವೇ. ಸ್ವಾವಲಂಬಿ ಸಾರಥಿ ಯೋಜನೆಗೆ ಹಿಂದೂ ಸಮುದಾಯವನ್ನು ಏಕೆ ಸೇರಿಸಿಲ್ಲ ಎಂಬುದು ನನ್ನ ಪ್ರಶ್ನೆ. ಈ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ. ಈಗ ನ್ಯಾಯಾಲಯದಲ್ಲಿ ಭೇಟಿಯಾಗುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 11 ರಂದು ಸುದ್ದಿ ಕಾರ್ಯಕ್ರಮವೊಂದರಲ್ಲಿ ಸುಧೀರ್ ಚೌಧರಿ ಅವರು, ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರಿಗೆ ಮಾತ್ರ ಲಾಭದಾಯಕ ಯೋಜನೆಯನ್ನು ಒದಗಿಸುತ್ತಿದೆ ಮತ್ತು ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಇಂತಹ ಯೋಜನೆಗಳಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಓಲೈಕೆ ನಡೆಯುತ್ತಿದೆ. ಇದರಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.
'ಇಂತಹ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಹಿಂದೂ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ ಯತ್ನ ಮಾಡಲಾಗುತ್ತಿದೆ. ಅಶಾಂತಿಯ ವಾತಾವರಣ ಸೃಷ್ಟಿಸಿ ಕೋಮುಗಲಭೆಗೆ ಪ್ರಚೋದನೆ ನೀಡುವ ಯತ್ನ ಇದಾಗಿದೆ. ಅವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಸಂಪೂರ್ಣ ಅರಿವಿದ್ದರೂ, ಈ ರೀತಿಯ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡಲು ಸಂಚು ರೂಪಿಸುತ್ತಿದ್ದಾರೆ' ಎಂದು ದೂರುದಾರರು ಆರೋಪಿಸಿದ್ದಾರೆ.
ಹೇಳಿಕೆ ಬಿಡುಗಡೆ ಮಾಡಿದ ಕೆಎಂಡಿಸಿ
ಈ ಹೇಳಿಕೆಯ ಪ್ರಕಾರ, ಕೆಎಂಡಿಸಿ ನಿರುದ್ಯೋಗಿ ಯುವಕರ ಸ್ವಾವಲಂಭಿ ಬದುಕಿಗೆ ಆಟೋ, ಸರಕು ಸಾಗಣೆ ವಾಹನ ಮತ್ತು ಟ್ಯಾಕ್ಸಿ ಖರೀದಿಗೆ ಗರಿಷ್ಠ 3 ಲಕ್ಷದವರೆಗೆ ಸಬ್ಸಿಡಿ ನೀಡುತ್ತಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮಗಳಲ್ಲೂ ಇದೇ ರೀತಿಯ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರವಲ್ಲದೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೂ ಇತ್ತು. ಯೋಜನೆಯು ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಲಭ್ಯವಿತ್ತು. ಅಲ್ಲದೆ, ಈ ಯೋಜನೆಗಳನ್ನು ಸದ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ' ಎಂದು ಹೇಳಿಕೆ ತಿಳಿಸಿದೆ.
'ಆದರೆ, ಸುದ್ದಿ ವಾಹಿನಿಯು ಈ ಸುದ್ದಿಯನ್ನು ತಿರುಚಿದೆ. ಇದು ಸಾಮಾನ್ಯವಾಗಿ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಯೋಜನೆ ರೂಪಿಸಲಾಗಿದೆ ಮತ್ತು ಇದರಿಂದಾಗಿ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದಿದೆ. ಇದು ಸುಳ್ಳು ಸುದ್ದಿ ಮತ್ತು ದುರುದ್ದೇಶಪೂರಿತ. ಇದು ಸಮಾಜದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಗುರಿಯನ್ನು ಹೊಂದಿದೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸುದ್ದಿ ಪ್ರಸಾರವಾದ ನಂತರ, ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರಿ ಯೋಜನೆಗಳ ಬಗ್ಗೆ ವಾಹಿನಿಯ ನಿರೂಪಕ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಮಂಗಳವಾರ ಆರೋಪಿಸಿದರು.
'ಆಜ್ ತಕ್ ವಾಹಿನಿಯ ನಿರೂಪಕ ಆಂಕರ್ ಉದ್ದೇಶಪೂರ್ವಕವಾಗಿ ಬಿಜೆಪಿ ಸಂಸದರು ಪ್ರಾರಂಭಿಸಿದ ಸರ್ಕಾರಿ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತವಾಗಿದೆ. ಸರ್ಕಾರ ಇದರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
Advertisement