ಗೊರವನಹಳ್ಳಿ ದೇವಿ ದರ್ಶನಕ್ಕೆ ಹೊರಟು ಮಸಣ ಸೇರಿದ ಶ್ರೀರಂಗಪಟ್ಟಣದ ಇಬ್ಬರು ಮಹಿಳೆಯರು: ತುಮಕೂರು ಬಸ್ ನಿಲ್ದಾಣದಲ್ಲಿ ದುರ್ಘಟನೆ
ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಲ್ಲಿಂದ ಮಹಿಳೆಯರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ ಎಂಬ ಸುದ್ದಿಯ ನಡುವೆ ದೇವಸ್ಥಾನಕ್ಕೆಂದು ಹೊರಟಿದ್ದ ಇಬ್ಬರು ಮಹಿಳೆಯರು ತುಮಕೂರು ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದಲ್ಲಿ ದಾರುಣ ಅಂತ್ಯ ಕಂಡ ಘಟನೆ ನಡೆದಿದೆ.
ಶ್ರೀರಂಗಪಟ್ಟಣದಿಂದ ಹೊರಟಿದ್ದ ಇಬ್ಬರು ಮಹಿಳೆಯರು ತುಮಕೂರಿಗೆ ಬಸ್ ಹತ್ತುವ ವೇಳೆ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಗೆ ಚಕ್ರದಡಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರು ಶ್ರೀರಂಗಪಟ್ಟಣದಿಂದ ಗೊರವನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದರು.
ಎರಡು ಬಸ್ಗಳ ನಡುವೆ ಸಿಲುಕಿ ಈ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಬಸ್ ನಿಲ್ದಾಣದಲ್ಲಿ ಬಸ್ ನ್ನು ರಿವರ್ಸ್ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ (60ವ) ಮತ್ತು ಪಂಕಜ (50ವ) ಮೃತ ದುರ್ದೈವಿಗಳು. ಉಚಿತ ಬಸ್ ಪ್ರಯಾಣ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ಮೂಲಕ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗಲು ಏಳು ಮಹಿಳೆಯುರ ತಂಡ ಬಸ್ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ದುರ್ಘಟನೆ ನಡೆದಿದೆ.
ಸದ್ಯ, ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

