ತಮಿಳುನಾಡಿಗೆ ಮತ್ತೆ ಕಾವೇರಿ ನೀರು: ಸಿಡಬ್ಲ್ಯೂಎಂಎ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ- ಡಿಸಿಎಂ ಡಿಕೆ ಶಿವಕುಮಾರ್
ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಹರಿಸುವುದನ್ನು ಮುಂದುವರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
Published: 18th September 2023 11:17 PM | Last Updated: 18th September 2023 11:18 PM | A+A A-

ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
ಬೆಂಗಳೂರು: ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಹರಿಸುವುದನ್ನು ಮುಂದುವರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ಪ್ರಸ್ತುತ ಸುಪ್ರೀಂಕೋರ್ಟ್ ಗೆ ಹೋಗಿ ಕಾವೇರಿ ನೀರಿನ ಬಗ್ಗೆ ವಾಸ್ತವಿಕ ಸಂಗತಿ ಪ್ರಸ್ತುಪಡಿಸುವುದೇ ರಾಜ್ಯಸರ್ಕಾರದ ಮುಂದಿರುವ ಏಕೈಕ ನಿರ್ಧಾರವಾಗಿದೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗುವುದು, ಈ ವಿಚಾರದಲ್ಲಿ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಾವೇರಿ: ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ಆದೇಶ
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಾಗದ ಕಾರಣವನ್ನು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೊಮ್ಮಾಯಿ ಹೇಳಿದ್ದು ಸರಿಯಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಅನುಸರಿಸದೆ ಮುಂದೆ ಹೋದರೆ ಸುಪ್ರೀಂ ಕೋರ್ಟ್ ನಮ್ಮ ಮನವಿ ವಜಾಗೊಳಿಸಿದರೆ ಏನು ಮಾಡೋದು ಎಂದು ಪ್ರಶ್ನಿಸಿದ ಅವರು, ಆ ಸಂದರ್ಭದಲ್ಲಿ ನಾವು ಆ ಆಯ್ಕೆಯನ್ನು ಕಳೆದುಕೊಳ್ಳುತ್ತೇವೆ ಎಂದರು.
ಈ ಬಗ್ಗೆ ರಾಜ್ಯ ಸರ್ಕಾರ ತನ್ನ ಕಾನೂನು ತಂಡದೊಂದಿಗೆ ಚರ್ಚಿಸುತ್ತಿದೆ ಎಂದು ತಿಳಿಸಿದ ಡಿಕೆ ಶಿವಕುಮಾರ್, ಕಾವೇರಿ ವಿಚಾರದಲ್ಲಿ 15 ದಿನಗಳಿಗೊಮ್ಮೆ ಆದೇಶ ಹೊರಡಿಸುವ ಬದಲು ವಾಸ್ತವ ಸ್ಥಿತಿ ತಿಳಿಯಲು ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ಸಿಡಬ್ಲ್ಯುಎಂಎ ತಂಡವನ್ನು ಕಳುಹಿಸಬೇಕು ಎಂದು ಸಚಿವರು ಹೇಳಿದರು.