ರಾಜ್ಯದ ಹೊಯ್ಸಳ ದೇವಾಲಯಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ದೇಶಕ್ಕೆ ಮತ್ತಷ್ಟು ಹೆಮ್ಮೆ ಎಂದ ಪ್ರಧಾನಿ

ಯುನೆಸ್ಕೊ  ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಸೇರ್ಪಡೆ ಮಾಡಲಾಗಿದೆ. ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. 
ಹಳೇಬೀಡಿನ ಪ್ರಸಿದ್ಧ ಹೊಯ್ಸಳೇಶ್ವರ ದೇವಸ್ಥಾನ
ಹಳೇಬೀಡಿನ ಪ್ರಸಿದ್ಧ ಹೊಯ್ಸಳೇಶ್ವರ ದೇವಸ್ಥಾನ

ಬೆಂಗಳೂರು: ಯುನೆಸ್ಕೊ  ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಸೇರ್ಪಡೆ ಮಾಡಲಾಗಿದೆ. ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. 

ಹೊಯ್ಸಳ ದೇವಾಲಯಗಳು, ಏಪ್ರಿಲ್ 2014 ರಿಂದಲೂ ಯುನೆಸ್ಕೊದ ತಾತ್ಕಾಲಿಕ ಪಟ್ಟಿಯಲ್ಲಿದ್ದವು. 2022-23 ಕ್ಕೆ ವಿಶ್ವ ಪಾರಂಪರಿಕ ತಾಣವಾಗಿ ಪರಿಗಣಿಸಲು ಜನವರಿ 2022 ರಲ್ಲಿ ಭಾರತದಿಂದ ನಾಮನಿರ್ದೇಶನ ಮಾಡಲಾಗಿತ್ತು. ಸರ್ಕಾರದ ಮನವಿಗೆ ಒಪ್ಪಿ ಈಗ ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದನ್ನು ವಿಶ್ವಸಂಸ್ಥೆಯು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. 

ಈ ವಿಚಾರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ,  ಇದು ದೇಶಕ್ಕೆ ಮತ್ತಷ್ಟು ಹೆಮ್ಮೆಯನ್ನುಂಟು ಮಾಡಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ. 

ಈ ಮೂರು ಹೊಯ್ಸಳ ದೇವಾಲಯಗಳು ಈಗಾಗಲೇ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಕ್ಷಿತ ಸ್ಮಾರಕಗಳಾಗಿವೆ.ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ. 

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com