ಅನಿಯಮಿತ ಮುಂಗಾರು, ಮಾನವ-ಪ್ರಾಣಿ ಸಂಘರ್ಷ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಆನೆಗಳ ದಾಂಗುಡಿ!; ರೈತರಲ್ಲಿ ಆತಂಕ
ಆನೆ, ಕರಡಿ, ಚಿರತೆ ಹಾಗೂ ಹುಲಿ ದಾಳಿಗೆ ಕಾಡಿನಂಚಿನ ಜನರು ಜೀವ ಕಳೆದುಕೊಳ್ಳುವುದು ಮತ್ತು ಊರಿನತ್ತ ತಲೆ ಹಾಕಿದ ಪ್ರಾಣಿಗಳು ಜನರಪ್ರತಿರೋಧಕ್ಕೆ ಸಾಯುವುದು ಶತಮಾನಗಳಿಂದಲೂ ನಡೆಯುತ್ತಿದೆ.
Published: 21st September 2023 03:19 PM | Last Updated: 21st September 2023 06:31 PM | A+A A-

ಸಾಂದರ್ಭಿಕ ಚಿತ್ರ
ಮೈಸೂರು: ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲಾಗದ ಕಾರಣ ಇಂದಿಗೂ ಅದು ಚರ್ಚಾವಿಷಯವಾಗಿ ಉಳಿದಿದೆ. ಆನೆ, ಕರಡಿ, ಚಿರತೆ ಹಾಗೂ ಹುಲಿ ದಾಳಿಗೆ ಕಾಡಿನಂಚಿನ ಜನರು ಜೀವ ಕಳೆದುಕೊಳ್ಳುವುದು ಮತ್ತು ಊರಿನತ್ತ ತಲೆ ಹಾಕಿದ ಪ್ರಾಣಿಗಳು ಜನರಪ್ರತಿರೋಧಕ್ಕೆ ಸಾಯುವುದು ಶತಮಾನಗಳಿಂದಲೂ ನಡೆಯುತ್ತಿದೆ. ಸರ್ಕಾರ ಹಾಗೂ ವಿಜ್ಞಾನಿಗಳು ಈ ಸಮಸ್ಯೆಗೆ ಇಂದಿಗೂ ಪರಿಹಾರ ಕಂಡುಹಿಡಿದಿಲ್ಲ.
ಚಾಮರಾಜನಗರ ತಾಲೂಕಿನ ಸುವರ್ಣಾವತಿ ಅಚ್ಚುಕಟ್ಟಿನ ಅತ್ತಿಗುಳಿಪುರದಲ್ಲಿ 67 ವರ್ಷದ ರೈತ ಶಿವಮೂರ್ತಿ ಮೂರು ಎಕರೆ ಜಮೀನು ಹೊಂದಿದ್ದಾರೆ. ಸಾಲ ಮಾಡಿ ಐದು ವರ್ಷಗಳಿಂದ 250 ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಮುಂದಿನ ವರ್ಷ ಇಳುವರಿ ಬರುವ ನಿರೀಕ್ಷೆ ಇತ್ತು. ಆದರೆ ಇತ್ತೀಚೆಗೆ ಆನೆಗಳ ಹಿಂಡು ಅವರ ಹೊಲಕ್ಕೆ ನುಗ್ಗಿ 24 ತೆಂಗಿನ ಮರಗಳನ್ನು ಧ್ವಂಸಗೊಳಿಸಿದ್ದರಿಂದ ಶಿವಮೂರ್ತಿ ಮತ್ತು ಅವರ ಪತ್ನಿ ಆಘಾತಕ್ಕೊಳಗಾಗಿದ್ದಾರೆ.
ಈ ಗಡಿ ಗ್ರಾಮಗಳಲ್ಲಿ ಆನೆಗಳ ದಾಳಿ ಸಾಮಾನ್ಯವಲ್ಲದಿದ್ದರೂ ಘಟನೆ ನಡೆದ ಸಮಯ ವಿಚಿತ್ರ ಎನಿಸಿದೆ. ಸಾಮಾನ್ಯವಾಗಿ, ಬೇಸಿಗೆಯ ತಿಂಗಳುಗಳಲ್ಲಿ ಆನೆಗಳು ಬರುತ್ತವೆ ಎಂದು ಗ್ರಾಮಸ್ಥರು ನಿರೀಕ್ಷಿಸುತ್ತಾರೆ, ಏಕೆಂದರೆ ಮಳೆಗಾಲದ ಮಧ್ಯದಲ್ಲಿ ಕಾಡುಗಳಲ್ಲಿ ಪ್ರಾಣಿಗಳಿಗೆ ಸಾಕಷ್ಟು ನೀರು ಮತ್ತು ಮೇವು ಸಿಗುತ್ತದೆ. ಆದರೆ ಸೆಪ್ಟೆಂಬರ್‌ನಲ್ಲಿ ಹೇಗೆ ಪ್ರಾಣಿಗಳು ಜಮೀನಿಗೆ ಬರಲು ಸಾಧ್ಯ ಎಂಬುದು ಶಿವಮೂರ್ತಿ ಪ್ರಶ್ನೆಯಾಗಿದೆ.
ಮಳೆಯಿಲ್ಲದ ಕಾರಣ, ನಿರಂತರ ಒಣಹವೆಯಿಂದಾಗಿ ಕಾಡುಗಳು ಒಣಗಿ, ಪ್ರಾಣಿಗಳು ಕಾಡಿನಿಂದ ಹೊರಬರುವಂತೆ ಮಾಡಿದೆ. ಚಾಮರಾಜನಗರ-ಕೊಯಮತ್ತೂರು ಹೆದ್ದಾರಿಯಲ್ಲಿನ ಹಳ್ಳಿಗಳ ಬಳಿ ಸಾಮಾನ್ಯವಾಗಿ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅರಣ್ಯದ ಅಂಚಿನಲ್ಲಿ ವಾಸಿಸುವ ಗ್ರಾಮಸ್ಥರು ಸಂಜೆ ತಡವಾಗಿ ಮನೆಗಳಿಂದ ಹೊರಬರಲು ಹೆದರುವಂತಾಗಿದೆ.
ಇನ್ನೂ ಮತ್ತೊಬ್ಬ ರೈತ ಕಾರ್ತಿಕ್ ಸಮಸ್ಯೆ ಶಿವಮೂರ್ತಿಯವರಿಗಿಂತ ಭಿನ್ನವಾಗಿಲ್ಲ. ಅವರೂ ಸಹ ಬಂಧು ಮಿತ್ರರಿಂದ ಸಾಲ ಮಾಡಿ ಗುತ್ತಿಗೆ ಪಡೆದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಬಾಳೆ ಕೃಷಿ ಕೈಗೆತ್ತಿಕೊಂಡ ಅವರು, ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಜಮೀನಿನ ಶೆಡ್‌ನಲ್ಲಿ ಮಲಗಿದ್ದರು. ಆದರೆ ಗಣೇಶ ಚತುರ್ಥಿ ಅವರ ಪಾಲಿಗೆ ಕರಾಳವಾಗಿತ್ತು, ಆನೆಗಳು ಅವರ ಜಮೀನಿಗೆ ನುಗ್ಗಿ 300 ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದವು. ಅಲ್ಲಿಯವರೆಗೂ ಕಾಡುಹಂದಿಗಳಿಂದ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಅವರು ಆನೆಗಳಿಗೆ ಏನೂ ಮಾಡಲಾಗಲಿಲ್ಲ. ಆನೆಗಳು ದಾಂಗುಡಿ ಇಟ್ಟ ವೇಳೆ ಸಹಾಯಕ್ಕಾಗಿ ಕಾರ್ತಿಕ್ ತನ್ನ ನೆರೆಹೊರೆಯವರನ್ನು ಎಚ್ಚರಿಸಲು ಪ್ರಯತ್ನಿಸಿದರು, ಆದರೆ ಪ್ರಯೋಜನವಾಗಲಿಲ್ಲ.
ಚನ್ನನಾಜಸ್ವಾಮಿ ದೇವಸ್ಥಾನದ ಬಳಿಯೂ ಆನೆಗಳು ಒಂದು ಎಕರೆ ಬಾಳೆ ತೋಟವನ್ನು ನಾಶಪಡಿಸಿವೆ. ವನ್ಯಜೀವಿ ದಾಳಿಯಿಂದ ಬೆಳೆ ನಷ್ಟವಾಗುತ್ತಿರಬಹುದು, ಆದರೆ ಕೃಷಿ ಮಾಡುವುದನ್ನು ನಿಲ್ಲಿಸಲಾಗದು ಮಹೇಶ್ ಎಂಬ ರೈತ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ 10-15 ವರ್ಷಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆ ನಾಶವಾದ ಕಾರಣ, ಹತಾಶೆಗೊಂಡ ಯುವಕರು ಜೀವನೋಪಾಯಕ್ಕಾಗಿ ಮೈಸೂರು, ಬೆಂಗಳೂರು ಮತ್ತು ತಮಿಳುನಾಡಿನ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನು ಕೆಲವರು ಪ್ರಾಣ ಕಳೆದುಕೊಂಡಿದ್ದು ಗ್ರಾಮಸ್ಥರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಮಳೆ ಕೊರತೆ, ಕರ್ನಾಟಕದಿಂದ ತಗ್ಗಿದ ಕಾವೇರಿ ನೀರು ಒಳಹರಿವು: ತಮಿಳು ನಾಡಿನಲ್ಲಿ ಜಲ ವಿದ್ಯುತ್ ಉತ್ಪಾದನೆ ಕುಸಿತ
ಮೂಡಹಳ್ಳಿ, ಹಲತ್ತೂರು ಮತ್ತಿತರ ಪ್ರದೇಶಗಳಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಕಾರ್ಯವನ್ನು ಪುನರಾರಂಭಿಸಿರುವ ಅರಣ್ಯ ಇಲಾಖೆಯು ಮಾನವ-ಪ್ರಾಣಿ ಸಂಘರ್ಷ ತಡೆಗೆ ಇಂತಹ ಕಾರಿಡಾರ್‌ಗಳನ್ನು ವಿಸ್ತರಿಸಲು ಹೆಚ್ಚಿನ ಭೂಮಿ ಖರೀದಿಸಬೇಕು ಎಂದು ವನ್ಯಜೀವಿ ಹೋರಾಟಗಾರ ಮಲ್ಲೇಶಪ್ಪ ಸಲಹೆ ನೀಡಿದ್ದಾರೆ.
ಅರಣ್ಯ ಇಲಾಖೆಯು ಬಿಳಿಗಿರಿರಂಗಸ್ವಾಮಿ ದೇವಸ್ಥಾನದ ಮೀಸಲು ಪ್ರದೇಶ, ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಳಿಗಳ ಮೂಲಕ ಬೇಲಿಗಳನ್ನು ಅಳವಡಿಸಿ ಪ್ರಾಣಿಗಳು ದಾರಿ ತಪ್ಪದಂತೆ ತಡೆಯಬೇಕು ಎಂದಿದ್ದಾರೆ.
ಮಳೆ ಕೊರತೆ ಮುಂದುವರಿದರೆ, ಜನವರಿ-ಫೆಬ್ರವರಿ ವೇಳೆಗೆ ಕಾಡಿನೊಳಗಿನ ನೀರಿನ ಹೊಂಡಗಳು ಬತ್ತಿ, ಕಾಡಿನ ಅಂಚಿನಲ್ಲಿ ವಾಸಿಸುವವರ ಜೀವನವನ್ನು ಕಾಡು ಪ್ರಾಣಿಗಳು ದುಸ್ತರಗೊಳಿಸುತ್ತದೆ. ಕಳೆದ ಐದು ವರ್ಷಗಳಿಂದ ಬಿದಿರು ಒಣಗಿ ಹೋಗಿದ್ದು, ಆನೆಗಳಿಗೆ ಇಷ್ಟವಾದ ಆಹಾರ ಸಿಗದಂತಾಗಿದೆ. ಅರಣ್ಯಾಧಿಕಾರಿಗಳು ಬಿದಿರಿನ ಬೀಜಗಳನ್ನು ಸಂಗ್ರಹಿಸಿ, ಲಂಟಾನ ಪೊದೆಗಳನ್ನು ತೆರವುಗೊಳಿಸಬೇಕು ಮತ್ತು ಪ್ರಾಣಿಗಳಿಗೆ ವಿಶೇಷವಾಗಿ ಆನೆಗಳಿಗೆ ಸಹಾಯ ಮಾಡಲು ಬಿದಿರಿನ ತೋಪುಗಳನ್ನು ಬೆಳೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.