ಕಾವೇರಿ ಕಿಚ್ಚು: ಮಂಡ್ಯ, ಮೈಸೂರು ಭಾಗಗಳಲ್ಲಿ ತೀವ್ರ ಪ್ರತಿಭಟನೆ, ಬೆಂಗಳೂರಿಗೆ ನೀರು ಪೂರೈಕೆ ನಿಲ್ಲಿಸಲು ಆಗ್ರಹ

ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಬೆನ್ನಲ್ಲೇ ಕರ್ನಾಟಕದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ.
ರೈತ ಸಂಘಟನೆಗಳು, ಕನ್ನಡಪರ, ಮಹಿಳಾ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
ರೈತ ಸಂಘಟನೆಗಳು, ಕನ್ನಡಪರ, ಮಹಿಳಾ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು/ಮಂಡ್ಯ/ಮೈಸೂರು: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಬೆನ್ನಲ್ಲೇ ಕರ್ನಾಟಕದಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ.

ಇಂದು ಮಂಡ್ಯದಲ್ಲಿ ರೈತರು, ಕನ್ನಡ ಸಂಘಟನೆಗಳಿಂದ ಸರಣಿ ಪ್ರತಿಭಟನೆ: ಇಂದು ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಮಂಡ್ಯ, ಮೈಸೂರು ಭಾಗಗಳಲ್ಲಿ ತೀವ್ರ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ತಮಿಳು ನಾಡಿಗೆ ನೀರು ಹರಿಸಬೇಕಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ರೈತರು ಮತ್ತು ಜನರಿಗೆ ಕುಡಿಯಲು, ವ್ಯವಸಾಯಕ್ಕೆ ನೀರು ಇಲ್ಲದಿರುವಾಗ ಬೆಂಗಳೂರಿಗೆ ಕಾವೇರಿ ನೀರನ್ನು ಕೆಲ ದಿನಗಳವರೆಗೆ ಸರಬರಾಜು ಮಾಡುವುದು ಬೇಡ ಎಂದು ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ.

ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಈಗಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ-CWMA ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ-CWRC ಆದೇಶಗಳಿಗೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ನಿನ್ನೆ ಗುರುವಾರ ಮಂಡ್ಯ ಮತ್ತು ಮೈಸೂರಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.

ರೈತ ಹಿತರಕ್ಷಣಾ ಸಮಿತಿಯು ನಾಳೆ ಶನಿವಾರ ಮಂಡ್ಯ ಬಂದ್‌ಗೆ ಕರೆ ನೀಡಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಪ್ರಮುಖ ಜಂಕ್ಷನ್‌ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸುತ್ತಿದ್ದಾರೆ. 

ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ನೆರೆ ರಾಜ್ಯಕ್ಕೆ ನೀರು ಬಿಡದಂತೆ ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಹಾಗೂ ಮೈಸೂರು ಕಾರ್ಖಾನೆ ಅಚ್ಚುಕಟ್ಟು ಕಬ್ಬು ಬೆಳೆಗಾರರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕಕ್ಕೆ ನೀಡಿರುವ ನಿರ್ದೇಶನಗಳು ಅವೈಜ್ಞಾನಿಕ ಎಂದ ಅವರು, ಕಾವೇರಿ ಜಲಾನಯನ ಪ್ರದೇಶದ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ನೀರು ಬಿಟ್ಟರೆ ದಾಹ ನೀಗಿಸಲು ನೀರು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಗತಿಪರ ರೈತ ಮದ್ದೂರಿನ ಕೆ.ಕೆಂಪರಾಜು, ಪಾಂಡವಪುರದ ಮಾಜಿ ಸೈನಿಕ ಆರ್.ಪಿ.ರವಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಅರ್ಜಿ ವಿಚಾರಣೆಗೆ ಬರಲಿದೆ.

ಇದೇ ವೇಳೆ ಕಬ್ಬು ಬೆಳೆಗಾರರು ಕೂಡ ಪ್ರತಿಭಟನೆ ನಡೆಸಿ ಹೆದ್ದಾರಿ ತಡೆ ನಡೆಸಿದರು. ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿ ಒಟ್ಟು 69 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ ಎಂದು ರೈತರು ಹೇಳಿದ್ದಾರೆ. ಸಂಕಷ್ಟದ ವರ್ಷದಲ್ಲಿ ನೀರು ಬಿಡುವಂತೆ ಕರ್ನಾಟಕಕ್ಕೆ ಹೇಳಿರುವುದು ರಾಜ್ಯಕ್ಕೆ ಮಾರಕವಾಗಿದೆ ಎಂದರು.

ಇದೇ ವೇಳೆ ಮೈಸೂರಿನಲ್ಲಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿ CWMA ಮತ್ತು  ತಮಿಳು ನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಮೈಸೂರಿನ ಕಾಡಾ ಕಚೇರಿ ಎದುರು ಕನ್ನಡ ಚಳವಳಿಗಾರರು ಹಾಗೂ ಕನ್ನಡ ಚಲುವಲಿಗರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ: ಮಂಡ್ಯ, ಮೈಸೂರು ಭಾಗಗಳಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಅದರಲ್ಲೂ ತಮಿಳರು ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ.

ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಸರಿಯಾಗಿ ವಾದ ಮಂಡಿಸಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ.ಕೆ.ಹಳ್ಳಿ ಪಂಪ್​​ಹೌಸ್​ಗೆ ಕನ್ನಡಪರ ಸಂಘಟನೆಗಳ ಮುತ್ತಿಗೆ ಹಾಕಲಿದ್ದು, ಬೆಂಗಳೂರಿಗೆ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com