ಸಿಡಬ್ಲ್ಯುಆರ್‌ಸಿ ತಮಿಳುನಾಡಿನ ಮನವಿ ತಿರಸ್ಕರಿಸಿದ್ದು ಸಂತೋಷ ತಂದಿದೆ: ಡಿಕೆ ಶಿವಕುಮಾರ್

ನಿತ್ಯ 12,000 ಕ್ಯೂಸೆಕ್‌ ನೀರು ಬಿಡುವಂತೆ ಕೋರಿ ತಮಿಳುನಾಡು ಮಾಡಿದ್ದ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ತಿರಸ್ಕರಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ನಿತ್ಯ 12,000 ಕ್ಯೂಸೆಕ್‌ ನೀರು ಬಿಡುವಂತೆ ಕೋರಿ ತಮಿಳುನಾಡು ಮಾಡಿದ್ದ ಮನವಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ತಿರಸ್ಕರಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಅಕ್ಟೋಬರ್ 15 ರವರೆಗೆ ನೆರೆಯ ರಾಜ್ಯಕ್ಕೆ 3,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದು ತೃಪ್ತಿ ತಂದಿದೆ ಎಂದು ಮಂಗಳವಾರ ಹೇಳಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲದೊಂದಿಗೆ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ನ ದಿನವೇ CWRC ಈ ಆದೇಶ ನೀಡಿದೆ.

ಇಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ, ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಅಂದರೆ 18 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ.

"ತಮಿಳುನಾಡು ಸರ್ಕಾರವು ನಿತ್ಯ 12,000 ಕ್ಯೂಸೆಕ್ ನೀರು ಕೇಳಿತ್ತು. ಆದರೆ CWRC ತಮಿಳುನಾಡು ಸರ್ಕಾರದ ಮನವಿ ತಿರಸ್ಕರಿಸಿದೆ. ಇದು ನಮ್ಮ ಜನರ ಹೋರಾಟದ ಫಲ. ಸಾಮಾನ್ಯವಾಗಿ ತಮಿಳುನಾಡಿಗೆ ನಿತ್ಯ ಸುಮಾರು 2,000 ಕ್ಯೂಸೆಕ್ ನೀರು ಹರಿದು ಹೋಗುತ್ತದೆ. ಇನ್ನೂ 1,000 ಕ್ಯೂಸೆಕ್ಸ್ ನಾವು ಹೆಚ್ಚುವರಿಯಾಗಿ ಬಿಡುಬೇಕು. 3,000 ಕ್ಯೂಸೆಕ್‌ಗೆ ಬಿಡುಗಡೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಖಾತೆ ಹೊಂದಿರುವ ಶಿವಕುಮಾರ್ ಅವರು ಹೇಳಿದ್ದಾರೆ.

ಆದರೆ, ಇಂದು ಬೆಂಗಳೂರು ಮತ್ತು ಶುಕ್ರವಾರ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡರುವ ಕುರುಬೂರು ಶಾಂತಕುಮಾರ್ ಮತ್ತು ವಾಟಾಳ್ ನಾಗರಾಜ್ ಅವರು ಸಿಡಬ್ಲ್ಯೂಆರ್‌ಸಿ ಶಿಫಾರಸು ವಿರೋಧಿಸಿದ್ದು, ತಮಿಳುನಾಡಿಗೆ ಹನಿ ನೀರು ಬಿಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕಳೆದೆರಡು ದಿನಗಳಿಂದ ಕಾವೇರಿ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ತಮಿಳುನಾಡಿನ ಅರ್ಜಿಯನ್ನು ತಿರಸ್ಕರಿಸಿರುವುದು ನನಗೆ ಸಂತೋಷ ತಂದಿದೆ. ಪಕ್ಷಾತೀತವಾಗಿ ಆಂದೋಲನಗಳಲ್ಲಿ ಭಾಗವಹಿಸಿದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com