ಯಾವುದೇ ಕಾರಣಕ್ಕೂ ಬಂದ್ ನಿಲ್ಲಿಸಲ್ಲ: ಕುರುಬೂರು ಶಾಂತಕುಮಾರ್; ಬಂದ್ ಗೆ ನನ್ನ ಸಂಪೂರ್ಣ ಬೆಂಬಲ- ಮಾಜಿ ಸಿಎಂ ಕುಮಾರಸ್ವಾಮಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಮಂಗಳವಾರ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಅದರ ಪರಿಣಾಮ ಬೆಳಗಿನ ಜಾವದಿಂದಲೇ ಕಾಣತೊಡಗಿದೆ. 
ಬೆಂಗಳೂರಿನಲ್ಲಿ ಇಂದಿನ ಚಿತ್ರಣ
ಬೆಂಗಳೂರಿನಲ್ಲಿ ಇಂದಿನ ಚಿತ್ರಣ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಮಂಗಳವಾರ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಅದರ ಪರಿಣಾಮ ಬೆಳಗಿನ ಜಾವದಿಂದಲೇ ಕಾಣತೊಡಗಿದೆ. 

ಈಗಾಗಲೇ ಸೆಪ್ಟೆಂಬರ್ 29ರಂದು ಇದೇ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಇಂದು ಬೆಂಗಳೂರು ಬಂದ್ ಆಚರಿಸುತ್ತಿದೆ. ಈ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆಯ ಕಾವು ಜೋರಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಬಂದ್ ಆಚರಿಸಲಾಗುತ್ತಿದ್ದು, ಸಂಜೆ 6 ಗಂಟೆಯವರೆಗೂ ಬಂದ್ ಮುಂದುವರಿಯಲಿದೆ. 

ನಗರದಾದ್ಯಂತ ಬಿಗಿ ಭದ್ರತೆ: ತಮಿಳು ಭಾಷಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ, ವೈಟ್ ಫೀಲ್ಡ್, ಅಲಸೂರು, ಕೆ ಆರ್ ಪುರಂ ಮುಂತಾದ ಕಡೆಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು ಪೊಲೀಸರಿಗೆ ನಿರ್ದೇಶನ ನೀಡಲಾಗುತ್ತಿದೆ. 

ಬಂದ್ ಬಗ್ಗೆ ಮಾತನಾಡಿದ ಬೆಂಗಳೂರು ಕೇಂದ್ರ ಡಿಸಿಪಿ ಶೇಖರ್ ಟಿ ತೆಕ್ಕಣ್ಣವರ್, ಸೂಕ್ತ ಬಂದೋಬಸ್ತ್ ಮಾಡಿದ್ದೇವೆ, ಆಯುಕ್ತರ ಆದೇಶದಂತೆ ಯಾವುದೇ ಪ್ರತಿಭಟನೆ, ಮೆರವಣಿಗೆಗೆ ಅವಕಾಶವಿಲ್ಲ, ಸಂಚಾರ ಸಹಜವಾಗಿದೆ ಎಂದರು. 

ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಬಿಎಂಟಿಸಿ ಪ್ರಕಾರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಯಾವುದೇ ಕಾರಣಕ್ಕೂ ಬಂದ್ ನಿಲ್ಲುವುದಿಲ್ಲ: ಕಾವೇರಿ ನೀರಿನ ವಿಚಾರವಾಗಿ ಇಂದು ಬೆಂಗಳೂರು ಬಂದ್​ಗೆ ಕರೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್​ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆ ಧರಣಿಗೆ ಅವಕಾಶವಿಲ್ಲ. ನಗರದ ವಿವಿಧೆಡೆ ಪ್ರತಿಭಟನೆ ನಡೆಸಲು ಮುಂದಾದರೆ ವಶಪಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸುಮಾರು 20 ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕರ್ನಾಟಕ ಸರ್ಕಾರ ನೀರಗಂಟಿ ಸರ್ಕಾರ. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ, ನಾವು ಯಾವುದೇ ಕಾರಣಕ್ಕೂ ಬಂದ್ ನ್ನು ನಿಲ್ಲಿಸುವುದಿಲ್ಲ ಎಂದು ಕುರುಬೂರು ಶಾಂತಕುಮಾರ್  ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ನಮ್ಮ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ನೀರುಗಂಟಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ಬಂದ್ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಜಲ್ಲಿಕಟ್ಟು ಆದಾಗ ತಮಿಳುನಾಡು ಪೋಲಿಸರು ಸಹಕಾರ ನೀಡಿದರು. ಇಲ್ಲಿ ಪೋಲಿಸರಿಂದ ಪ್ರತಿಭಟನೆ ಮಾಡುವವರಿಗೆ ಕೆಲವೊಂದು ಸಮಸ್ಯೆ ಆಗುತ್ತಿದೆ ಎಂದು ಗೊತ್ತಾಗಿದೆ. ಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. 144 ಸೆಕ್ಷನ್ ಹಾಕಬಾರದಿತ್ತು. ನಮ್ಮ ಹೋರಾಟ, ಚಳವಳಿ ಇರಲಿದೆ. ಈಗ ಟೌನ್‌ಹಾಲ್‌ಗೆ ಹೋಗುತ್ತಿದ್ದೇವೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಪೋಲಿಸರು ಎಚ್ಚರಿಕೆಯಿಂದ ಇರಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಬಂದ್ ಗೆ ನನ್ನ ಸಂಪೂರ್ಣ ಬೆಂಬಲ: ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್​ಗೆ ನನ್ನ ಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ, ಬಂದ್ ಯಶಸ್ವಿ ಆಗಲಿ. ಜೆಡಿಎಸ್​ ಪಕ್ಷದ ಕಾರ್ಯಕರ್ತರು ಕೂಡ ಬಂದ್​ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com