ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತ: ಡಿಕೆ ಶಿವಕುಮಾರ್; ಅ.5ಕ್ಕೆ ಕೆಆರ್‌ಎಸ್ ಗೆ ಮುತ್ತಿಗೆ ಎಂದ ವಾಟಾಳ್ ನಾಗರಾಜ್
ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ತಿಳಿಸಿದರು.
Published: 29th September 2023 03:04 PM | Last Updated: 29th September 2023 08:44 PM | A+A A-

ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದೆ ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅಪಾರ ಸಹಕಾರ ನೀಡಿದ್ದಾರೆ. ಬಂದ್‌ಗೆ ಕರೆ ನೀಡದಂತೆ ಮನವಿ ಮಾಡಿದ್ದೇವೆ. ಆದರೂ, ಕರೆ ನೀಡಿರುವ ಕರ್ನಾಟಕ ಬಂದ್ ಶಾಂತಿಯುತವಾಗಿದ್ದು, ಸುರಕ್ಷಿತವಾಗಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ನಡೆಸಲಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯವನ್ನು ಪ್ರತಿನಿಧಿಸಲು ತಂಡವನ್ನು ಕಳುಹಿಸಲಾಗಿದೆ ಮತ್ತು ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎಂದರು.
ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸಂಕಷ್ಟ ಸೂತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಹಿರಿಯ ಮಾಜಿ ವಕೀಲರು ಮತ್ತು ಕರ್ನಾಟಕದ ನ್ಯಾಯಾಧೀಶರೊಂದಿಗೆ ಸಭೆ ನಡೆಸಲಾಗುವುದು.
ಇದೇ ವೇಳೆ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಕಾವೇರಿ ಬಂದ್ ತೀವ್ರ, ಸಿಎಂ ಸಿದ್ದರಾಮಯ್ಯ ಭೇಟಿಯಾದ ಗೃಹ ಸಚಿವ ಪರಮೇಶ್ವರ್!
ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆದರೆ, ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು.
ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ: ವಾಟಾಳ್ ನಾಗರಾಜ್
ಬಂದ್‌ಗೆ ಕರೆ ನೀಡಿದ ಪ್ರಮುಖರಲ್ಲಿ ಒಬ್ಬರಾದ ವಾಟಾಳ್ ನಾಗರಾಜ್ ಅವರನ್ನು ಬಿಡುಗಡೆ ಮಾಡಿದ ಪೊಲೀಸರು, ಪ್ರತಿಭಟನೆಗಾಗಿ ಸರ್ಕಾರ ನಿಗದಿಪಡಿಸಿದ ಫ್ರೀಡಂ ಪಾರ್ಕ್‌ಗೆ ವಾಹನದಲ್ಲಿ ಕರೆತರಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಅಕ್ಟೋಬರ್ 5ರಂದು ಕನ್ನಡಪರ ಸಂಘಟನೆಗಳು ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಸಹಸ್ರಾರು ರೈತರು ಭಾಗವಹಿಸಲಿದ್ದಾರೆ. ಪ್ರತಿಭಟಿಸುವ ಹಕ್ಕನ್ನು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಿತ್ತುಕೊಳ್ಳುತ್ತಿದೆ. ದೆಹಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕನ್ನಡಿಗರ ಸಾಮರ್ಥ್ಯ ತೋರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯಗೆ ಇದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ವಿಮಾನ, ಬಸ್ ಸೇವೆ ರದ್ದತಿಯಿಂದ ಪ್ರಯಾಣಿಕರಿಗೆ ಸಂಕಷ್ಟ!
ಈಮಧ್ಯೆ, ಕರ್ನಾಟಕ ಬಂದ್ ಅಂಗವಾಗಿ ಮಂಡ್ಯ ಜಿಲ್ಲೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ 200ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಕಾರ್ಯಕರ್ತರು ಏಕಾಏಕಿ ಎಕ್ಸ್‌ಪ್ರೆಸ್‌ವೇ ಪ್ರವೇಶಿಸಿ ವಾಹನ ಸಂಚಾರವನ್ನು ತಡೆಯಲು ಯತ್ನಿಸಿದರು. ಪೊಲೀಸರು ಗುಂಪನ್ನು ಹತ್ತಿಕ್ಕಿದರು. 200ಕ್ಕೂ ಹೆಚ್ಚು ಜನರನ್ನು ಬಂಧಿಸಿದರು ಮತ್ತು ತ್ವರಿತವಾಗಿ ಸಂಚಾರವನ್ನು ಪುನರಾರಂಭಿಸಿದರು.