ಮುರುಘಾ ಮಠ: ವನಶ್ರೀ ಸಂಸ್ಥಾನ ಮಠದ ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಧಾರ್ಮಿಕ ಉಸ್ತುವಾರಿ

ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಧಾರ್ಮಿಕ ಕಾರ್ಯಗಳ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ವನಶ್ರೀ ಸಂಸ್ಥಾನ ಮಠದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
ಮುರುಘಾ ಮಠ
ಮುರುಘಾ ಮಠ
Updated on

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಧಾರ್ಮಿಕ ಕಾರ್ಯಗಳ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ವನಶ್ರೀ ಸಂಸ್ಥಾನ ಮಠದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.

ಈಗಾಗಲೇ ನಿವೃತ್ತ ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ಆಡಳಿತಾಧಿಕಾರಿ ಎಂದು ನೇಮಕ ಮಾಡಿದ್ದ ರಾಜ್ಯ ಸರ್ಕಾರ ಇವರ ಜೊತೆಗೆ ಮೂವರು ಸದಸ್ಯರ ಹೊಸ ಸಮಿತಿ ಸೇರ್ಪಡೆ ಮಾಡಿದೆ. ಇವರಲ್ಲಿ ಬಸವ ಕುಮಾರ ಸ್ವಾಮೀಜಿ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್‌ ಎನ್‌ ಚಂದ್ರಶೇಖರ್‌ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಎಮಿರಿಟಸ್‌ ಪ್ರೊಫೆಸರ್‌ ಡಾ.ಪಿ ಎಸ್‌ ಶಂಕರ್‌ ಇದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಬಸವ ಕುಮಾರ ಸ್ವಾಮೀಜಿ ಕುವೆಂಪು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ವಿಜಯಪುರದ ವನಶ್ರೀ ಸಂಸ್ಥಾನ ಮಠದ ಪೀಠಾಧಿಪತಿ, ಬಿಡದಿಯಲ್ಲಿರುವ ಯೋಗವನ ಬೆಟ್ಟದ ನಾಲ್ಕು ಶಾಖೆಗಳಿಗೆ ಅಧ್ಯಕ್ಷರಾಗಿ ಹಾಗೂ ಹರಿಹರ ತಾಲ್ಲೂಕಿನ ಹೊಸಹಳ್ಳಿಯ ಹೇಮ–ವೇಮ ಸದ್ಭೋದನಾ ವಿದ್ಯಾಪೀಠದ ಗೌರವಾಧ್ಯಕ್ಷರಾಗಿದ್ದಾರೆ.

ಸಮಿತಿಗೆ ವಿಧಿಸಲಾಗಿರುವ ನಿಯಮ ಮತ್ತು ಷರತ್ತುಗಳು:

  • ಮಠ ಮತ್ತು ವಿದ್ಯಾಪೀಠದ ವ್ಯಾಪ್ತಿಯಲ್ಲಿನ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ಕ್ರಮಬದ್ಧವಾದ ಆಡಳಿತ ಮತ್ತು ಚಟುವಟಿಕೆಗಳ ಮೂಲಕ ನಿರ್ವಹಣೆ ಮಾಡುವುದು.

  • ಆಡಳಿತ ಸಮಿತಿಯು ಮಠ ಹಾಗೂ ವಿದ್ಯಾಪೀಠದ ವ್ಯಾಪ್ತಿಯಲ್ಲಿನ ಟ್ರಸ್ಟ್‌ ಮತ್ತು ಶೈಕ್ಷಣಿಕ ಸಂಸ್ಥೆಗಳ ಆರ್ಥಿಕ ಮತ್ತು ಆಡಳಿತದ ಸಂಪೂರ್ಣ ಮೇಲ್ವಿಚಾರಣೆ ಮಾಡುವುದು.

  • ಆಡಳಿತ ಸಮಿತಿಯು ಮಠದ ದೈನಂದಿನ ಪೂಜೆ ಮತ್ತು ದೇವತಾ ವಿಧಿವಿಧಾನಗಳನ್ನು ಒಳಗೊಂಡಂತೆ ಮಠದ ಧಾರ್ಮಿಕ ಕಾರ್ಯಗಳನ್ನು ಯಥಾವತ್ತಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕು ಹಾಗೂ ಅದರ ಎಲ್ಲಾ ವೆಚ್ಚಗಳನ್ನು ಮಠದ ವತಿಯಿಂದ ಭರಿಸಬೇಕು.

  • ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅಥವಾ ಮೊಕದ್ದಮೆ ನಡೆಸಲು ಆಡಳಿತ ಸಮಿತಿಯು ಅಧಿಕಾರ ಹೊಂದಿರುತ್ತದೆ.

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾದ ಕಾರಣ ಅವರ ಬಂಧನದ ನಂತರ ಬಸವಪ್ರಭು ಸ್ವಾಮೀಜಿ ಅವರನ್ನು ಧಾರ್ಮಿಕ ಕಾರ್ಯಗಳ ಮೇಲುಸ್ತುವಾರಿಗಾಗಿ ನೇಮಕ ಮಾಡಲಾಗಿತ್ತು. ಈಗ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸಲು ಹೊಸ ಸಮಿತಿ ನೇಮಿಸಲು ನಿರ್ದೇಶಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com