ವಿಜಯಪುರ borewell ಅವಘಡ: ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ, ರಕ್ಷಣೆಗೆ ಹರಸಾಹಸ, ಬಂಡೆ ಅಡ್ಡಿ!

ಕರ್ನಾಟಕದಲ್ಲಿ ಮತ್ತೊಂದು ಬೋರ್ವೆಲ್ ಅವಘಡ ವರದಿಯಾಗಿದ್ದು, ಎರಡು ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ
ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ

ವಿಜಯಪುರ: ಕರ್ನಾಟಕದಲ್ಲಿ ಮತ್ತೊಂದು ಬೋರ್ವೆಲ್ ಅವಘಡ ವರದಿಯಾಗಿದ್ದು, ಎರಡು ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ (Lachyana) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರಡು ವರ್ಷದ ಸಾತ್ವಿಕ್ ಮುಜಗೊಂಡ ಎಂಬ ಮಗು, ತೆರೆದ ಕೊಳವೆ ಬಾವಿಗೆ (Open Borewel) ಬಿದ್ದಿದೆ. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಇಂದು (ಏಪ್ರಿಲ್ 03) ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. 2 ಬೃಹತ್ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ
ವಿಜಯಪುರ: ತಾತ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮೊಮ್ಮಗ; ಪೋಷಕರ ಆಕ್ರಂದನ!

ನಿನ್ನೆಯಷ್ಟೇ ಕೊರೆಸಿದ್ದ ಬೋರ್ ವೆಲ್

ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಬೋರ್​ವೆಲ್ ಕೊರೆಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದ್ರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು ಎಂದು ಹೇಳಲಾಗಿದೆ. ಇದೀಗ ಶಂಕರಪ್ಪ ಮುಜಗೊಂಡ ಮೊಮ್ಮಗ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದಾನೆ.

20 ಅಡಿ ಆಳದಲ್ಲಿ ಮಗು

ಮೂಲಗಳ ಪ್ರಕಾರ ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ್ ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಕೊಳವೆ ಬಾಲಿಗೆ ಆ್ಯಕ್ಸಿಜನ್​​ ವ್ಯವಸ್ಥೆ ಮಾಡಿ ಮಗುವಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಸ್ಥಳಕ್ಕೆ ಎಸ್​ಡಿಆರ್​ಎಫ್ ತಂಡ

ಬೋರ್​ವೆಲ್​ ಪಕ್ಕದಲ್ಲಿ 2 JCB ಮೂಲಕ ಹಳ್ಳ ತೆಗೆಯುವ ಕಾರ್ಯ ನಡೆದಿದೆ. ಮಗುವಿನ ರಕ್ಷಣೆಗೆ ಬೆಳಗಾವಿಯಿಂದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ(ಎಸ್​ಡಿಆರ್​ಎಫ್ ) ಸಹ ಘಟನಾ ಸ್ಥಳಕ್ಕೆ ಆಗಮಿಸುತ್ತಿದೆ. ಇನ್ನು ಸ್ಥಳಕ್ಕೆ ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ, ಎಸ್​ಪಿ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಘಟನೆ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಮಗುವಿನ ರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ.

ರಕ್ಷಣೆಗೆ ಹರಸಾಹಸ

ಮಗು ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ ಹಿಟಾಚಿ ಯಂತ್ರವನ್ನು ಬಳಸಿ ಕೊಳವೆಬಾವಿ ಸುತ್ತಲೂ ಅಗೆಯುವ ಕೆಲಸ ಮುಂದುವರೆಸಿದ್ದಾರೆ. ಕೊಳವೆ ಬಾವಿಯ 5 ಅಡಿ ದೂರದಲ್ಲಿ ಮಣ್ಣು ತೆರವು ಮಾಡಲು ಕಾರ್ಯಾಚರಣೆ ಮುಂದುವರಿದಿದೆ. 20 ಅಡಿಯ ವರೆಗೆ ಡಿಗ್ಗಿಂಗ್ ಮಾಡಿ ಬಳಿಕ, ರಂಧ್ರ ಕೊರೆದು, ಮಗು ಇರುವ ಜಾಗ ತಲುಪಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹಿಟಾಚಿ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾದ ಹಿನ್ನೆಲೆ ಬ್ರೇಕರ್ ಮೂಲಕ ಕಲ್ಲು ಒಡೆಯುವ ಕಾರ್ಯವೂ ಚಾಲ್ತಿಯಲ್ಲಿದೆ. ಕ್ಯಾಮೆರಾ ಬಿಟ್ಟು ಮಗುವಿನ ಚಲನವಲನದ ಮೇಲೆ ನಿಗಾ ಇಡುವುದು, ಆತನಿಗೆ ನೀರು ಸೇರಿ ಅಗತ್ಯ ವಸ್ತುಗಳನ್ನು ಪೂರೈಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಜಿಲ್ಲೆಯಲ್ಲಿ 3ನೇ ಪ್ರಕರಣ

ಈ ಹಿಂದೆ ಇದೇ ರೀತಿ ವಿಜಯಪುರ ಜಿಲ್ಲೆಯಲ್ಲಿ 2 ಬೋರ್ವೆಲ್ ದುರಂತ ಪ್ರಕರಣಗಳು ವರದಿಯಾಗಿತ್ತು. 2008 ಮತ್ತು 2014ರಲ್ಲಿಕೊಳವೆ ಬಾವಿ ದುರಂತಗಳು ಸಂಭವಿಸಿದ್ದವು. 2008 ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕಾಂಚನಾ ಉರ್ಪ್ ಏಗವ್ವ ಎನ್ನುವ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಮಗು ಮೃತಪಟ್ಟಿತ್ತು. ಳಿಕ ಇಂಥದ್ದೇ ಘಟನೆ 2014 ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿತ್ತು. ಆಟವಾಡುವ ವೇಳೆ 3 ವರ್ಷದ ಬಾಲಕಿ ಅಕ್ಷತಾ ಹನುಮಂತ ಪಾಟೀಲ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಅಕ್ಷತಾ ರಕ್ಷಣಾ ಕಾರಾಚರಣೆ ನಡೆದರೂ ಫಲ ಸಿಕ್ಕಿರಲಿಲ್ಲ. ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಅಕ್ಷತಾ ಬದುಕಿ ಬರಲಿಲ್ಲ.

ರಾಜ್ಯದ ವಿವಿಧೆಡೆ ದಾಖಲಾಗಿದ್ದ ಪ್ರಕರಣಗಳು

ಕೊಳವೆ ಬಾವಿಗೆ ಬಿದ್ದು 2000 ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ ಸಾವು, 2007 ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್ ಸಾವು, 2014 ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ ಸಾವು, 2017 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com