ಮಂಡ್ಯದಿಂದ ಸ್ಪರ್ಧಿಸಲ್ಲ, HDKಗೆ ಬೆಂಬಲ: ಸುಮಲತಾ ಘೋಷಣೆ. ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ! - ಈ ದಿನದ ಸುದ್ದಿ ಮುಖ್ಯಾಂಶಗಳು: 03-04-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಲೋಕಸಭೆ ಚುನಾವಣೆ ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಲೋಕಸಭೆ ಚುನಾವಣೆ ಸಂಬಂಧ ಏಪ್ರಿಲ್ 26ರಂದು ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿರುವುದರಿಂದ ರಾಜಕೀಯ ಪಕ್ಷಗಳ ಬಹುತೇಕ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿಗಳಾದ ಲಕ್ಷ್ಮಣ್, ರಾಜೀವ್ ಗೌಡ, ರಕ್ಷಾ ರಾಮಯ್ಯ, ಶ್ರೇಯಸ್ ಪಟೇಲ್, ಸೌಮ್ಯರೆಡ್ಡಿ, ಸ್ಟಾರ್ ಚಂದ್ರು, ಕೆ ಜಯಪ್ರಕಾಶ್ ಹೆಗ್ಡೆ, ಆರ್ ಪದ್ಮರಾಜ್ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ವಿ, ಸೋಮಣ್ಣ, ಗೋವಿಂದ ಕಾರಜೋಳ, ಡಾ. ಕೆ ಸುಧಾಕರ್, ಪಿಸಿ ಮೋಹನ್, ಕೋಟ ಶ್ರೀನಿವಾಸ್ ಪೂಜಾರಿ ಸಹ ಇಂದು ನಾಮಪತ್ರ ಸಲ್ಲಿಸಿದ್ದಾರೆ.

2. ಮಂಡ್ಯದಿಂದ ಸ್ಪರ್ಧಿಸಲ್ಲ, HDKಗೆ ಬೆಂಬಲ: ಸುಮಲತಾ ಘೋಷಣೆ

ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಈ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರುವ ತೀರ್ಮಾನ ಮಾಡಿದ್ದಾರೆ. ಇನ್ನು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿ, ಈ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ್ದ ಸಂಸದೆ ಸುಮಲತಾ ಅಂಬರೀಷ್ ಮಂಡ್ಯದಲ್ಲಿಂದು ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದು, ಅವರ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಇತ್ತು. ಈ ಕುತೂಹಲಕ್ಕೆ ಇಂದು ತೆರೆ ಎಳೆದಿರುವ ಸಂಸದೆ ಸುಮಲತಾ ಅಂಬರೀಷ್, ಬಿಜೆಪಿ ಸೇರ್ಪಡೆಯಾಗುವ ಘೋಷಣೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರುವ ತೀರ್ಮಾನ ಮಾಡಿದ್ದಾರೆ.

3. ಹಿರಿಯ ಪತ್ರಕರ್ತ ಎಂ.ಕೆ ಭಾಸ್ಕರರಾವ್‌ ಇಂದು ನಿಧನ

ಹಿರಿಯ ಪತ್ರಕರ್ತ ಎಂ.ಕೆ ಭಾಸ್ಕರರಾವ್‌ ಇಂದು ನಿಧನರಾಗಿದ್ದಾರೆ. 75 ವರ್ಷದ ಭಾಸ್ಕರರಾವ್ ಅವರು ಎರಡು ವರ್ಷದಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಸೌತ್‌ ಸಿಟಿ ಅಪಾರ್ಟ್‌ ಮೆಂಟ್‌ ಗೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಭಾಸ್ಕರರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಭಾಸ್ಕರ ರಾವ್ ನಿವೃತ್ತಿಯ ನಂತರವೂ ಪತ್ರಕರ್ತನಾಗಿ ಸಕ್ರಿಯರಾಗಿದ್ದರು. ತನ್ನ ಸೌಜನ್ಯಭರಿತ ನಡವಳಿಕೆಯಿಂದ ಎಲ್ಲರಿಗೂ ಆತ್ಮೀಯರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

4. ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಎದುರೆ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಎದುರೆ ವ್ಯಕ್ತಿಯೊಬ್ಬ ಹರಿತವಾದ ಸಣ್ಣ ಚಾಕುವಿನಿಂದ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪ್ರಕರಣವೊಂದರ ವಿಚಾರಣೆಯ ಅಂತ್ಯದ ವೇಳೆಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಂದ ಚಿನ್ನಂ ಶ್ರೀನಿವಾಸ ತಮ್ಮ ಕೈಲಿದ್ದ ಕಡತವನ್ನು ನ್ಯಾಯಮೂರ್ತಿಗಳಿಗೆ ಕೊಡಲು ಮುಂದಾಗಿದ್ದಾರೆ. ಆದರೆ ಮುಖ್ಯ ನ್ಯಾಯಮೂರ್ತಿಗಳು ಆ ಕಡತವನ್ನು ತೆಗೆದುಕೊಳ್ಳಲಿಲ್ಲ. ಕೂಡಲೇ ಸಣ್ಣ ಚಾಕುವನ್ನು ತೆಗೆದು ತನ್ನ ಗಂಟಲಿನ ಬಳಿ ಹಿಡಿದುಕೊಂಡು ನನಗೆ ನ್ಯಾಯ ಕೊಡಿಸಿ ಎಂದು ಕುತ್ತಿಗೆಯನ್ನು ಕೊಯ್ದುಕೊಂಡಿದ್ದಾನೆ. ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕೂಡಲೇ ಪೊಲೀಸರು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕತ್ತು ಕುಯ್ದುಕೊಂಡಿದ್ದರಿಂದ ಅನ್ನನಾಳದ ಅಕ್ಕಪಕ್ಕದ ರಕ್ತನಾಳಗಳು ಕಟ್ ಆಗಿದೆ. ಪರಿಸ್ಥಿತಿ ಗಂಭೀರ ಹಿನ್ನೆಲೆ ವೈದ್ಯರು ಆಪರೇಷನ್ ನಡೆಸಿದ್ದಾರೆ.

5. ಚುನಾವಣಾ ವೆಚ್ಚ ಮೇಲೆ ಕಣ್ಗಾವಲಿಡಲು ವಿಶೇಷ ಅಧಿಕಾರಿ ನೇಮಕ

ಚುನಾವಣಾ ವೆಚ್ಚ ಮೇಲೆ ಕಣ್ಗಾವಲಿಡಲು ಭಾರತೀಯ ಕಂದಾಯ ಸೇವೆ ಅಧಿಕಾರಿ ಬಿ ಮುರಳಿ ಕುಮಾರ್ ಅವರನ್ನು ವಿಶೇಷ ಅಧಿಕಾರಿಯಾಗಿ ಭಾರತೀಯ ಚುನಾವಣಾ ಆಯೋಗ ನೇಮಕ ಮಾಡಿದೆ. ಅಸ್ತಿತ್ವದಲ್ಲಿರುವ ಚುನಾವಣಾ ವೆಚ್ಚದ ಮೇಲ್ವಿಚಾರಣೆಯನ್ನು ಬಲಪಡಿಸಲು ವೀಕ್ಷಕರನ್ನು ನೇಮಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕರ್ನಾಟಕವಷ್ಟೇ ಅಲ್ಲದೆ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಿಗೂ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿದೆ. 2019ಕ್ಕೆ ಹೋಲಿಸಿದರೆ 2024ರ ಲೋಕಸಭೆ ಚುನಾವಣೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೇವಲ 10 ದಿನಗಳಲ್ಲಿ ವಶಪಡಿಸಿಕೊಳ್ಳುವುತ್ತಿರುವುದು ಶೇ.110ರಷ್ಟು ಹೆಚ್ಚಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮಾಹಿತಿ ನೀಡಿದೆ.

6. ರಿವಾಲ್ವರ್ ಹಿಡಿದು ರೀಲ್ಸ್; ಇಬ್ಬರು ಯುವಕರ ಬಂಧನ

ರಿವಾಲ್ವರ್ ಹಿಡಿದು ರೀಲ್ಸ್ ಮಾಡಿ ಫೋಸ್ ಕೊಡುತ್ತಿದ್ದ ಇಬ್ಬರು ಯುವಕರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಇಬ್ಬರಿಗೆ ಬಿಸಿ ಮುಟ್ಟಿಸಿದ್ದಾರೆ. ಬಂಧಿತರನ್ನು ಅಫ್ಜಜಲಶೇಖ್, ದೀಪಕ್ ಚೌಹಾಣ್ ಎಂದು ಗುರುತಿಸಲಾಗಿದೆ. ಇಬ್ಬರು ಯುವಕರು ರಿವಾಲ್ವರ್ ಹಿಡಿದು ರೀಲ್ಸ್ ಮಾಡಿ ನಂತರ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ನಡುರಸ್ತೆಯಲ್ಲಿ ಯುವಕರನ್ನು ರಿವಾಲ್ವರ್ ಹಿಡಿದು ತಿರುಗುತ್ತಿದ್ದದ್ದು ನಾಗರಿಕರ ಆತಂಕಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com