ಎತ್ತು ಏರಿಗೆ... ಕೋಣ ನೀರಿಗೆ...: ಅನಧಿಕೃತ ಲೇಔಟ್ ಗೆ BDA ತಡೆ, ಆದರೂ ಸೈಟ್ ಗಳಿಗೆ BBMP ಯಿಂದ ಎ-ಖಾತಾ ಮಂಜೂರು!

ಲೇಔಟ್ ರಚನೆಗೆ ಬಿಡಿಎ ಯಾವುದೇ ಅನುಮೋದನೆ ನೀಡದ ಕಾರಣ ಬಿಬಿಎಂಪಿ ಎ ಖಾತೆ ನೀಡಲು ಸಾಧ್ಯವಿಲ್ಲ, ಆದರೂ 2002ರಲ್ಲಿ ಬಿಬಿಎಂಪಿ ಎ-ಖಾತಾ ನೀಡಿತ್ತು.
ಅಗ್ರಹಾರ ಲೇ ಔಟ್
ಅಗ್ರಹಾರ ಲೇ ಔಟ್

ಬೆಂಗಳೂರು: ಇತ್ತೀಚೆಗೆ ವೈಟ್‌ಫೀಲ್ಡ್‌ನ ಪಟ್ಟಂದೂರು ಅಗ್ರಹಾರದಲ್ಲಿ ಲೇ ಔಟ್ ನ್ನು ಸಮತಟ್ಟು ಮಾಡುತ್ತಿದ್ದ ಬಿಲ್ಡರ್ ಗಳಿಗೆ ಕೆಲಸ ನಿಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಸೂಚನೆ ನೀಡಿತು. ಈ ಸಂದರ್ಭದಲ್ಲಿ ಬಿಡಿಎಗೆ, ಪಟ್ಟಂದೂರು ಅಗ್ರಹಾರದ ಸರ್ವೆ ನಂಬರ್ 19/2ರಲ್ಲಿನ 33 ನಿವೇಶನಗಳಿಗೆ ಬೆಂಗಳೂರು ಮಹಾ ನಗರ ಪಾಲಿಕೆ ಎ-ಖಾತಾ ನೀಡಿ ಅಭಿವೃದ್ಧಿ ಶುಲ್ಕ ಮತ್ತು ತೆರಿಗೆಯನ್ನು ಸಂಗ್ರಹಿಸಿರುವ ಅಚ್ಚರಿಯ ವಿಚಾರ ತಿಳಿದುಬಂತು.

ಅಕ್ರಮ ಬಡಾವಣೆ ನಿರ್ಮಾಣ ಕುರಿತು ಇಲ್ಲಿನ ನಿವಾಸಿಗಳು ಹಾಗೂ ಕಾರ್ಯಕರ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಬಿಲ್ಡರ್ ಬಿಡಿಎ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಬಿಡಿಎ ಮೊನ್ನೆ ಏಪ್ರಿಲ್ 3 ರಂದು ಈ ಪ್ರದೇಶದ ಮೇಲೆ ದಾಳಿ ನಡೆಸಿ ಲೇ ಔಟ್ ನ ಸಮತಟ್ಟು ಮಾಡುವ ಕೆಲಸ ಮಾಡಬಾರದೆಂದು ಬಿಲ್ಡರ್‌ಗೆ ಸೂಚನೆ ನೀಡಿತು. ಬಿಲ್ಡರ್ ಲೇ ಔಟ್ ಗೆ ಯೋಜನಾ ಮಂಜೂರಾತಿ ಪಡೆದು ಕಾನೂನು ಪ್ರಕಾರ ನಿರ್ಮಾಣ ಆರಂಭಿಸಿದರೆ ಮಾತ್ರ ಈ ತಡೆಯಾಜ್ಞೆ ಅನ್ವಯವಾಗುತ್ತದೆ. ಆದರೆ ಪಟ್ಟಂದೂರು ಅಗ್ರಹಾರ ಲೇ ಔಟ್ ಪ್ರಕರಣದಲ್ಲಿ ಯಾವುದೇ ಅನುಮೋದನೆ ನೀಡಿಲ್ಲ. ಹೀಗಾಗಿ ಅಕ್ರಮ ಕಾಮಗಾರಿ ನಿಲ್ಲಿಸುವ ಹಕ್ಕು ನಮಗಿದೆ ಎಂದು ಬಿಡಿಎ ಹೇಳುತ್ತಿದೆ ಎನ್ನುತ್ತಾರೆ ಅಕ್ರಮಗಳ ಪತ್ತೆಹಚ್ಚುವ ಉಪಸಮಿತಿ, ವೈಟ್ ಫೀಲ್ಡ್ ನಾಗರಿಕರ ವಾರ್ಡ್ ಸಮಿತಿಗಳ ಸಂಯೋಜಕ ಸಂದೀಪ್ ಅನಿರುಧನ್.

ಲೇಔಟ್ ರಚನೆಗೆ ಬಿಡಿಎ ಯಾವುದೇ ಅನುಮೋದನೆ ನೀಡದ ಕಾರಣ ಬಿಬಿಎಂಪಿ ಎ ಖಾತೆ ನೀಡಲು ಸಾಧ್ಯವಿಲ್ಲ, ಆದರೂ 2002ರಲ್ಲಿ ಬಿಬಿಎಂಪಿ ಎ-ಖಾತಾ ನೀಡಿತ್ತು. ಜೆಸಿಬಿ ಮೂಲಕ ಲೇಔಟ್ ಸಮತಟ್ಟು ಮಾಡುವುದು ನಿಲ್ಲಿಸಿದಾಗ, ಕಾಂಪೌಂಡ್ ಗೋಡೆಗೆ ಬಿಡಿಎ ಹಾನಿ ಮಾಡಿದೆ ಎಂದು ಆರೋಪಿಸಿ ಮಾಲೀಕರು ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ಬೆಳವಣಿಗೆ ಆಧಾರದ ಮೇಲೆ, ಅವರು ತಡೆಯಾಜ್ಞೆಯನ್ನು ಪಡೆದರು. ಈಗ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ ಎಂದರು.

ಅಗ್ರಹಾರ ಲೇ ಔಟ್
ಅಕ್ರಮ ಕಟ್ಟಡ ಕೆಡವಲು ನಮ್ಮ ಬಳಿ ಹಣವಿಲ್ಲ: BBMP

ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ಮಾಲೀಕರಿಗೆ ಬಿಡಿಎ ನೊಟೀಸ್ ನೀಡಿದ್ದು, ಬೆಂಗಳೂರು ಪೂರ್ವ ತಾಲೂಕಿನ ಉಪನೋಂದಣಿ ಕಚೇರಿಗೆ ಆಸ್ತಿ ನೋಂದಣಿ ಮಾಡದಂತೆ ಪತ್ರ ಕಳುಹಿಸಲಾಗುವುದು ಎಂದು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್ ಎಸ್ ಅರವಿಂದ್ ತಿಳಿಸಿದ್ದಾರೆ. ಮಾಲೀಕರು ಕೇವಲ ಜಮೀನು ಸಮತಟ್ಟು ಮಾಡುತ್ತಿದ್ದಾರೆಯೇ ಹೊರತು ಯಾವುದೇ ಬಡಾವಣೆ ಅಭಿವೃದ್ಧಿಪಡಿಸುತ್ತಿಲ್ಲ ಎಂದು ಹೇಳಿದ್ದಾರೆ.

ಆದರೆ, ನಿವಾಸಿಗಳು ಮತ್ತು ಕಾರ್ಯಕರ್ತರು ಬಿಡಿಎ ಸ್ಪಷ್ಟೀಕರಣ ಒಪ್ಪಲು ಸಿದ್ಧರಿಲ್ಲ. ಬಿಡಿಎ ನೀಡಿರುವ ವಿವರಣೆಯು ವಾಸ್ತವ ಪರಿಸ್ಥಿತಿಗೆ ಭಿನ್ನವಾಗಿದೆ. ಕೊಳಚೆ ನೀರಿನ ಪೈಪ್ ಅಳವಡಿಕೆ, ಲೇಔಟ್ ಯೋಜನೆ ಪ್ರಕಾರ ರಸ್ತೆಗಳನ್ನು ಸಮತಟ್ಟುಗೊಳಿಸುವುದು, ಕುಡಿಯುವ ನೀರಿನ ಪೈಪ್ ಅಳವಡಿಸುವ ಮೂಲಕ ಲೇಔಟ್ ಕಾಮಗಾರಿ ನಡೆಯುತ್ತಿರುವುದು ರಾಜಾರೋಷವಾಗಿ ನಡೆಯುತ್ತಿದೆ ಎಂದು ಸಂದೀಪ್ ಅನಿರುಧನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com