HDK ವಿರುದ್ಧ Congress ದೂರು. ಗದ್ದಲ ಸಭೆಯಿಂದ ಹೊರನಡೆದ ತೇಜಸ್ವಿ ಸೂರ್ಯ. ಈಶ್ವರಪ್ಪಗೆ ನಾಮಪತ್ರ ಹಿಂಪಡೆಯಲು ಗಡುವು! ಈ ದಿನದ ಸುದ್ದಿ ಮುಖ್ಯಾಂಶಗಳು: 15-4-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. HDK ವಿರುದ್ಧ Congress ದೂರು

ಗ್ಯಾರಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಇದೀಗ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ದಾರಿ ತಪ್ಪಿದಾಗ ನನ್ನ ಹೆಂಡತಿ ಸರಿ ದಾರಿಗೆ ತಂದಿದ್ದಾರೆ ಎಂದು ನಾನು ಸದನದಲ್ಲೇ ಹೇಳಿದ್ದೇನೆ ಎಂದರು. ಈಮಧ್ಯೆ, ಈಮಧ್ಯೆ, ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲದೆ, HDK ವಿರುದ್ಧ ಮಂಡ್ಯದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.

2. ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು

ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಭಗವಂತ ಖೂಬಾ, ನಟ ಶಿವರಾಜಕುಮಾರ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿಗಳಾದ ಗೀತಾ ಶಿವರಾಜಕುಮಾರ್, ಆನಂದಸ್ವಾಮಿ ಗಡ್ಡದೇವರಮಠ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ ಹಾಗೂ ದಾವಣಗೆರೆಯಿಂದ ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಸಹ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

3. ಗದ್ದಲ ಸಭೆಯಿಂದ ಹೊರನಡೆದ ತೇಜಸ್ವಿ ಸೂರ್ಯ

ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಭೆಯೊಂದಲ್ಲಿ ಗದ್ದಲವುಂಟಾದ ಪರಿಣಾಮ ಸಿಟ್ಟಿಗೆದ್ದ ಸಂಸದ ತೇಜಸ್ವಿ ಸೂರ್ಯ ಸಭೆಯಿಂದ ಹೊರಗೆ ನಡೆದಿದ್ದಾರೆ. ಏಪ್ರಿಲ್‌ 13ರಂದು ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆ ಕರೆಯಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಹಾಗೂ ಠೇವಣಿದಾರರ ನಡುವೆ ಗದ್ದಲವುಂಟಾಗಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತೇಜಸ್ವಿ ಸೂರ್ಯ, ಇಡೀ ಘಟನೆ ಪೂರ್ವನಿಯೋಜಿತವಾಗಿದ್ದು ಕಾಂಗ್ರೆಸ್ ಇದನ್ನು ಯೋಜಿಸಿತ್ತು ಎಂದು ಹೇಳಿದರು. ಅಲ್ಲದೆ ಸಭೆ ವೇಳೆ ಕೋಲಾಹಲ ಉಂಟುಮಾಡಿದ ವ್ಯಕ್ತಿಗಳು ಕಾಂಗ್ರೆಸ್ ನಾಯಕರಿಗೆ ಸ್ಥಳದಿಂದ ವೀಡಿಯೋ ಕರೆ ಮಾಡಿದ್ದಾರೆ ಎಂದು ಆರೋಪಿಸಿದರು.

4. ಕಾಡಾನೆ ದಾಳಿ: ವೃದ್ಧ ಸಾವು

ಕೊಡಗಿನ ಶ್ರೀಮಂಗಲ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ 63 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾಫಿ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಯ್ಯಮಾಡ ಮಾದಯ್ಯ ಎಂಬುವವರು ಕಾಫಿ ಎಸ್ಟೇಟ್ ಬಳಿ ಬೆಳಗಿನ ವಾಕಿಂಗ್ ಹೋಗಿದ್ದಾಗ, ಏಕಾಏಕಿ ಎದುರಿನಿಂದ ಬಂದ ಆನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5. ಈಶ್ವರಪ್ಪಗೆ ನಾಮಪತ್ರ ಹಿಂಪಡೆಯಲು ಗಡುವು

ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕೆಇ ಕಾಂತೇಶ್ ಗೆ ಹಾವೇರಿ ಲೋಕಸಭೆ ಕ್ಷೇತ್ರದ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತ್ತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಎಸ್ ವೈ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಪಣತೊಟ್ಟಿರುವ ಈಶ್ವರಪ್ಪ ಕಳೆದ ವಾರ ತಮ್ಮ ನಾಮಪತ್ರವನ್ನೂ ಸಲ್ಲಿಸಿದ್ದರು. ಈ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಈಶ್ವರಪ್ಪ ಅವರು ನಾಮಪತ್ರ ವಾಪಸ್ ಪಡೆಯದಿದ್ದರೆ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com