ಗ್ರಾಮ ವಿಕಾಸ, ನರೇಗಾದಡಿ ಲಕ್ಷಾಂತರ ರೂ. ಅವ್ಯವಹಾರ: ಲೋಕಾಯುಕ್ತರಿಂದ ತನಿಖೆ

ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ನರೇಗಾದಡಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ. ಅವ್ಯವಹಾರ ಕುರಿತು ಲೋಕಾಯುಕ್ತರು ತನಿಖೆ ಆರಂಭಿಸಿದ್ದಾರೆ.
ಲೋಕಾಯುಕ್ತ ಸಬ್ ಇನ್ಸ್ ಪೆಕ್ಟರ್ ಸತೀಶ್ ಮತ್ತಿತರರು
ಲೋಕಾಯುಕ್ತ ಸಬ್ ಇನ್ಸ್ ಪೆಕ್ಟರ್ ಸತೀಶ್ ಮತ್ತಿತರರು

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ನರೇಗಾದಡಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ.ಮೊತ್ತದ ಅವ್ಯವಹಾರ ಕುರಿತು ಲೋಕಾಯುಕ್ತರು ತನಿಖೆ ಆರಂಭಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿನ ತಂಡ ಬುಧವಾರ ವಿವಿಧ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಈ ಕುರಿತು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಭ್ರಷ್ಟಾಚಾರ ನಿಗ್ರಹದಳದಲ್ಲಿ ದಾಖಲಿಸಿದ್ದ ದೂರನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಮೊದಲಿಗೆ ಬೆಳಗಾವಿಗೆ ಭೇಟಿ ನೀಡಿದ ತಂಡ ಮೇಲ್ಛಾವಣಿ ಇಲ್ಲದೆ, ಅಪೂರ್ಣಗೊಂಡಿರುವ ಸಮುದಾಯ ಭವನವನ್ನು ವೀಕ್ಷಿಸಿತು. ಈ ಭವನ ನೋಡಲು ದನದ ಕೊಟ್ಟಿಗೆ ರೂಪದಲ್ಲಿ ಕಂಡುಬಂದಿತು. ಇದಕ್ಕೆ ಗ್ರಾಮ ವಿಕಾಸ ಹಾಗೂ ತಾಲ್ಲೂಕ್ ಪಂಚಾಯಿತಿ ಎರಡೂ ಕಡೆಯಲ್ಲಿ ಬಿಲ್ ಮಂಜೂರಾಗಿರುವ ಆರೋಪ ಕೇಳಿಬಂದಿದೆ.

ನಂತರ ಸೀಗೇಕುಪ್ಪೆ ಗ್ರಾಮಕ್ಕೆ ತೆರಳಿದ ತಂಡ ಅಲ್ಲಿ 2017-18ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಚರಂಡಿ ಕಾಮಗಾರಿ ಮಾಡದಿದ್ದರೂ ಬಿಲ್ ಪಾವತಿಯಾಗಿರುವುದರ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೀಗೇಕುಪ್ಪೆ ಜನತಾ ಕಾಲೋನಿಯಲ್ಲಿ ಒಂದೇ ಕಡೆಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಹಾಗೂ ನರೇಗಾದಡಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಬಿಲ್ ಪಾವತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪಾರ್ಕ್ ಹೆಸರಿನಲ್ಲಿ ಲಕ್ಷಾಂತರ ಹಣ ಗುಳಂ: ಚಕ್ರಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನರೇಗಾದಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆಯಂತೆ. ಆದರೆ, ಇದು ನೋಡಿದರೆ ಯಾವುದೇ ಕಾರಣಕ್ಕೂ ಪಾರ್ಕ್ ಅನ್ನಿಸಲ್ಲ, ಒಂದೆರಡು ಮರಗಳು ಬಿಟ್ಟರೆ ಬೇರೆ ಯಾವುದೇ ರೀತಿಯ ಸಸಿಗಳು ಇಲ್ಲ, ರೋಗಿಗಳು ಕುಳಿತುಕೊಳ್ಳಲು ಆಸನ ಇಲ್ಲ, ಓಡಾಡಲು ರಸ್ತೆ ಇಲ್ಲ, ಆದರೂ. ಬಿಲ್ ಪಾವತಿಯಾಗಿರುವ ಆರೋಪ ಕುರಿತು ಸತೀಶ್ ತನಿಖೆ ನಡೆಸಿದರು. ಅಲ್ಲದೇ ಚಕ್ರಬಾವಿ ಬಳಿ ಇರುವ ಚಿಕ್ಕಯ್ಯನ ಗುಡಿ ಬಳಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಅದಕ್ಕೆ ನರೇಗಾ ಹಾಗೂ 14 ಫೈನಾನ್ಸ್ ಅಡಿ ಡಬಲ್ ಬಿಲ್ ಆಗಿರುವ ಆರೋಪವಿದೆ.

ಚಕ್ರಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಪಾರ್ಕಿನ ಸ್ಥಿತಿ
ಚಕ್ರಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಪಾರ್ಕಿನ ಸ್ಥಿತಿ
ಸಮುದಾಯ ಶೌಚಾಲಯಕ್ಕೆ ಡಬಲ್ ಬಿಲ್
ಸಮುದಾಯ ಶೌಚಾಲಯಕ್ಕೆ ಡಬಲ್ ಬಿಲ್

ಕಾಂಕ್ರಿಟ್ ರಸ್ತೆ ಹೆಸರಿನಲ್ಲಿ 15 ಲಕ್ಷ ಗೋಲ್ ಮಾಲ್: ಇನ್ನೂ ಅರಳುಕುಪ್ಪೆ ಬಳಿ ಹೊನ್ನಯ್ಯಪಾಳ್ಯದಲ್ಲಿ ಸರಿಯಾಗಿ ರಸ್ತೆ ಕೂಡಾ ಮಾಡಿಲ್ಲ, ಆದರೆ, ಕಾಂಕ್ರಿಟ್ ರಸ್ತೆ ಮಾಡಿರುವುದಾಗಿ ಮುಖ್ಯಮಂತ್ರಿ ಗ್ರಾಮ ವಿಕಾಸ ಹಾಗೂ ನರೇಗಾದಡಿ ಸುಮಾರು 15 ಲಕ್ಷ ರೂ. ಬಿಲ್ ಪಾವತಿಯಾಗಿದೆ ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗುಡ್ಡೇಗೌಡ ಅವರು ದಾಖಲೆ ಸಮೇತ ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ಈ ಎಲ್ಲಾ ಅವ್ಯವಹಾರ ಆರೋಪಗಳ ಕುರಿತಂತೆ ಶನಿವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿ ಪವನ್ ಕುಮಾರ್ , ಬಿಲ್ ಕಲೆಕ್ಟರ್ ಅರುಣ್ ಅವರಿಗೆ ಲೋಕಾಯುಕ್ತರು ಸೂಚಿಸಿದರು.

ಕಾಂಕ್ರೀಟ್ ರಸ್ತೆ ಹೆಸರಿನಲ್ಲಿ ತೋರಿಸಲಾದ ಮಣ್ಣಿನ ರಸ್ತೆ ಚಿತ್ರ
ಕಾಂಕ್ರೀಟ್ ರಸ್ತೆ ಹೆಸರಿನಲ್ಲಿ ತೋರಿಸಲಾದ ಮಣ್ಣಿನ ರಸ್ತೆ ಚಿತ್ರ

ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೀಗೇಕುಪ್ಪೆ, ಅರಳಕುಪ್ಪೆ ಗ್ರಾಮಗಳಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರಾಗಿದೆ. ಆದರೆ, ಏಳೆಂಟೂ ವರ್ಷವಾದರೂ ಕಾಮಗಾರಿ ಕುಂಟುತಾ ಸಾಗಿದೆ. ಕೆಲವು ಕಡೆ ಚರಂಡಿ,ಕಾಂಕ್ರಿಟ್ ರಸ್ತೆ ಮತ್ತು ಕಳಪೆ ಸಮುದಾಯ ಭವನ ನಿರ್ಮಾಣ ಕಾಮಗಾರಿ ಹೊರತುಪಡಿಸಿದರೆ ಉಳಿದ ಯಾವುದೇ ಕಾಮಗಾರಿ ಆಗಿಲ್ಲ. ಆದಾಗ್ಯೂ, ನಕಲಿ ಬಿಲ್ ಮಾಡಲಾಗಿದೆ.

ಇನ್ನೂ ಬಯಲು ರಂಗಮಂದಿರ, ಗರಡಿ ಮನೆ, ಕೃಷಿ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತಿತರ ಕಾಮಗಾರಿಗಳು ಆಗಬೇಕಿದೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಕಾಮಗಾರಿ ನಿರ್ವಹಣೆ ಹೊತ್ತಿದೆ. ಆದರೆ, ಸರ್ಕಾರದ ಅಂಗಸಂಸ್ಥೆ ಕಾಮಗಾರಿಯನ್ನು ಸ್ಥಳೀಯ ಪುಡಾರಿ ರಾಜಕಾರಣಿಗಳಿಗೆ ಗುತ್ತಿಗೆ ನೀಡುವ ಮೂಲಕ ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಲೋಕಾಯುಕ್ತರು ಪ್ರಾಮಾಣಿಕವಾಗಿ ತನಿಖೆ ನಡೆಸುವ ಮೂಲಕ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುಡ್ಡೇಗೌಡರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com