ಬೆಂಗಳೂರು: ಕರ್ನಾಟಕದಲ್ಲಿ ಏಪ್ರಿಲ್ 26 ರಂದು ನಡೆಯಲಿರುವ 2ನೇ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕೆ 48 ಗಂಟೆಗಳ ಮೊದಲು ಅಂದರೆ ಏಪ್ರಿಲ್ 24 ರಿಂದ ರಾಜಕೀಯ ಪ್ರಚಾರ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಆದೇಶದ ಪ್ರಕಾರ, ಪ್ರಚಾರದ ಅವಧಿ ಮುಗಿದ ನಂತರ, ಎಲ್ಲ ರಾಜಕೀಯ ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತರು ಮತದಾರರಾಗಿ ನೋಂದಾಯಿಸಿಕೊಂಡಿರದ ಕ್ಷೇತ್ರಗಳಲ್ಲಿ ಉಳಿಯುವಂತಿಲ್ಲ.
ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ವಸತಿಗೃಹಗಳು ಮತ್ತು ಹೊರಗಿನವರಿಗೆ ವಸತಿ ಕಲ್ಪಿಸುವ ಅತಿಥಿಗೃಹಗಳನ್ನು ಪರಿಶೀಲಿಸಲು ಜಿಲ್ಲಾ ಚುನಾವಣಾ ಆಡಳಿತ ಮತ್ತು ಪೊಲೀಸರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.
ಮತಕ್ಷೇತ್ರದ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಓಡಾಟವನ್ನು ಪತ್ತೆ ಹಚ್ಚಲಾಗುವುದು. ವ್ಯಕ್ತಿಯು ಆ ಕ್ಷೇತ್ರದ ಮತದಾರರೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ ಗುರುತಿನ ಚೀಟಿಗಳನ್ನು ಸಹ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದೆ.
Advertisement