ಟೆಕ್ ಸಿಟಿಯಿಂದ ಟ್ಯಾಂಕರ್ ಸಿಟಿ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು
ಬೆಂಗಳೂರು: ‘ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ್ದು ಕಾಂಗ್ರೆಸ್’ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಲಿ, ಆಗ ನಾಳೆಯೇ ಕಾಮಗಾರಿ ಶುರು ಮಾಡಿ ಬೆಂಗಳೂರಿನಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ತಿಲಾಂಜಲಿ ಹಾಡುತ್ತೇನೆಂದು ಸವಾಲು ಹಾಕಿದ್ದಾರೆ.
ಬಂಗಾರಪೇಟೆಯಲ್ಲಿ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಬೃಹತ್ ರೋಡ್ ಶೋ ನಡೆಸಿದ ಅವರು, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಈ ವೇಳೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಶನಿವಾರ ಮಾಡಿದ ಟ್ಯಾಂಕರ್ ಸಿಟಿ ಟೀಕೆಗೆ ಸಂಬಂಧಿಸಿದ ಭಾಷಣದಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ಅದರ ಪರಿಹಾರಕ್ಕಾಗಿ ನಾವು ನಾಳೆಯೇ ಮೇಕೆದಾಟು ಕಾಮಗಾರಿ ಆರಂಭಿಸಲು ಸಿದ್ಧ. ಆದರೆ, ಅವರು ಅನುಮತಿ ಕೊಡುತ್ತಾರೆಯೇ ಎಂದು ಕೇಂದ್ರ ಸರ್ಕಾರದ ಕಾಲೆಳೆದರು.
ಮೋದಿ ಅವರು ಉಚಿತ ಅಕ್ಕಿ ಕೊಟ್ಟಿಲ್ಲ. ರಾಜ್ಯದಲ್ಲಿ ಉಚಿತ ಅಕ್ಕಿ ಕೊಟ್ಟಿದ್ದು ನಾನು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ ಐದು ಕಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ದುಡ್ಡು ಕೊಡುತ್ತಿದ್ದೇವೆ ಅಕ್ಕಿ ಪೂರೈಸಿ ಎಂದು ಕೇಂದ್ರಕ್ಕೆ ಮನವಿ ಮಾಡದ್ದೆವು. ಆದರೆ, ಅವರು ಅಕ್ಕಿ ಪೂರೈಸುತ್ತಿಲ್ಲ. ಹತ್ತು ಕೆಜಿ ಉಚಿತ ಅಕ್ಕಿಕೊಟ್ಟರೆ ಬಡವರು ಸಿದ್ದರಾಮಯ್ಯ ಪರ ಆಗುತ್ತಾರೆ ಎಂದು ಅವರು ಕೊಡಲಿಲ್ಲ ಎಂದರು.
2008 ರಿಂದ 2013 ರವರೆಗಿನ ಬಿಜೆಪಿ ಆಡಳಿತದಲ್ಲಿ ಡಿನೋಟಿಫಿಕೇಶನ್ ಮತ್ತು ಭೂಕಬಳಿಕೆ ಪ್ರಕರಣಗಳಿಂದಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಕೆಲವು ಸಹೋದ್ಯೋಗಿಗಳು ಜೈಲು ಪಾಲಾಗಿದ್ದರು. ಬಿಜೆಪಿ ಸರ್ಕಾರವು ಯೋಜನೆಗಳ ಅನುಷ್ಠಾನಕ್ಕಾಗಿ ಗುತ್ತಿಗೆದಾರರಿಂದ 'ಶೇ 40 ರಷ್ಟು ಕಮಿಷನ್' ಸಂಗ್ರಹಿಸಿದೆ. ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಬೇಡಿಕೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುವ ಇಚ್ಛೆಯ ಕೊರತೆಯಿಂದಾಗಿ ಬಿಜೆಪಿ ಸರ್ಕಾರ ಕೇವಲ ಒಂದು ವರ್ಷದ ಹಿಂದಿನವರೆಗೆ ಹೇಗೆ ಹೂಡಿಕೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳನ್ನು ಬೆಂಗಳೂರಿನಿಂದ ಓಡಿಸಿತ್ತು ಎಂಬುದು ಜನರಿಗೆ ಇನ್ನೂ ನೆನಪಿದೆ. ಬಿಜೆಪಿಯ ವೈಫಲ್ಯಗಳು ಫಾಕ್ಸ್‌ಕಾನ್, ಓಲಾ ಮತ್ತು ಇತರ ಕಂಪನಿಗಳನ್ನು ಬೆಂಗಳೂರು ತೊರೆಯಲು ಪ್ರೇರೇಪಿಸಿದೆ ಎಂದು ಆರೋಪಿಸಿದರು.
ಭೂಹಗರಣ ಮತ್ತು ಡಿನೋಟಿಫಿಕೇಷನ್‌ಗಳ ಸರಣಿಯಿಂದ ಲಾಭ ಪಡೆಯುವ ಆತುರದಲ್ಲಿ ಬಿಜೆಪಿ-ಜೆಡಿ(ಎಸ್) ಸಮ್ಮಿಶ್ರ ಸರ್ಕಾರ ನೀರು ಮತ್ತು ನೈರ್ಮಲ್ಯಕ್ಕೆ ಸಮರ್ಪಕ ಯೋಜನೆ ರೂಪಿಸದೆ 110 ಗ್ರಾಮಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ವಿಲೀನಗೊಳಿಸಿದೆ ಎಂದು ಕಿಡಿಕಾರಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ