ಮೃತ ನೇಹಾ ಹಿರೇಮಠ್ ಮನೆಗೆ ಭೇಟಿ: ಪೋಷಕರಿಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ!

ಫಯಾಜ್ ನಿಂದ ಭೀಕರವಾಗಿ ಹತ್ಯೆಗೀಡಾಗಿದ್ದ ಮೃತ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಸಿದ್ದರಾಮಯ್ಯ-ನಿರಂಜನ ಹಿರೇಮಠ
ಸಿದ್ದರಾಮಯ್ಯ-ನಿರಂಜನ ಹಿರೇಮಠPTI

ಧಾರವಾಡ: ಫಯಾಜ್ ನಿಂದ ಭೀಕರವಾಗಿ ಹತ್ಯೆಗೀಡಾಗಿದ್ದ ಮೃತ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಘಟನೆ ದುರದೃಷ್ಟಕರ. ನೇಹಾ ಹಿರೇಮಠ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಸಿಐಡಿಗೆ ವಹಿಸಿದ್ದೇನೆ ಎಂದರು. ಅದರ ಜೊತೆಗೆ ನಾವು ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವನ್ನು ರಚಿಸುತ್ತೇವೆ ಎಂದರು.

ಇನ್ನು ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಿಬಿಐಗೆ ಕೇಸ್ ಕೊಟ್ಟಿದೆಯೇ? ಒಂದೇ ಒಂದು ಪ್ರಕರಣವನ್ನು ನನಗೆ ತೋರಿಸಿ, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ನಿರಾಕರಿಸಿದ ಅವರು, ನೇಹಾ ಹಿರೇಮಠ ಹತ್ಯೆ ಹಿನ್ನೆಲೆ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತ್ರ ಧಾರವಾಡಕ್ಕೆ ಬಂದಿದ್ದೇನೆ. ನಾವು ಹಿರೇಮಠ ಜೊತೆ ಇರುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಸಿದ್ದರಾಮಯ್ಯ-ನಿರಂಜನ ಹಿರೇಮಠ
ಮನೆಯೊಳಗೆ ಚಿತ್ರೀಕರಣ ನಡೆಸಿರುವ ಅಪರಿಚಿತರಿಂದ ನಮ್ಮ ಕುಟುಂಬಕ್ಕೆ ಅಪಾಯದ ಭೀತಿ: ನೇಹಾ ತಂದೆ

ನೇಹಾ ತಂದೆ ನಿರಂಜನ ಹಿರೇಮಠ ಮಾತನಾಡಿ, ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಆದೇಶಿಸಿದ ಸಿದ್ದರಾಮಯ್ಯ ಮತ್ತು ರಾಜ್ಯ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಪ್ರಕರಣದಲ್ಲಿ 90 ದಿನಗಳಲ್ಲಿ ನ್ಯಾಯ ದೊರಕಿಸಿಕೊಡಲಾಗುವುದು ಅಥವಾ ವಿಳಂಬವಾದರೆ 120 ದಿನಗಳನ್ನು ಮೀರುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಭರವಸೆ ನೀಡಿದ್ದಾರೆ. ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹಿರೇಮಠ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ಪುರಸಭೆಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ 23 ವರ್ಷದ ನೇಹಾ ಹಿರೇಮಠಳನ್ನು ಏಪ್ರಿಲ್ 18ರಂದು ಬಿವಿಬಿ ಕಾಲೇಜಿನ ಆವರಣದಲ್ಲಿ ಆಕೆಯ ಮಾಜಿ ಸಹಪಾಠಿ ಫಯಾಜ್ ಎಂಬಾತ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದನು. ಫಯಾಜ್ ನೇಹಾಗೆ ಹಲವು ಬಾರಿ ಇರಿದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದವು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com